ಹುಣಸೂರು:- ನಗರದ ಬೈಪಾಸ್ ರಸ್ತೆಯ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಜರುಗಿದೆ.
ರಾಜೇಶ್(35) ಲೋಕೇಶ್(40), ಸೋಮೇಶ್(42), ಮನು(26) ಮೃತಪಟ್ಟ ದುರ್ದೈವಿಗಳು. ಶುಂಠಿ ಬೆಳೆ ಕೊಯ್ಲಿಗಾಗಿ ಹೆಚ್ಡಿ ಕೋಟೆಯಿಂದ ಪಿರಿಯಾಪಟ್ಟಣ ಮಾರ್ಗವಾಗಿ ಕೊಡಗಿಗೆ ಜೀಪಿನಲ್ಲಿ 10 ಮಂದಿ ಕೂಲಿ ಕಾರ್ಮಿಕರು ತೆರಳುತ್ತಿದ್ದಾಗ ವಿರಾಜಪೇಟೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಐವರಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಫಘಾತದ ರಭಸಕ್ಕೆ ಜೀಪು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಅದರಲ್ಲೆ ಶವಗಳು ಸಿಲುಕಿಕೊಂಡಿದ್ದರೆ, ಕೆಳಗೆ ಬಿದ್ದ ಇಬ್ಬರ ವ್ಯಕ್ತಿಗಳ ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಸುದ್ದಿ ತಿಳಿದ ಕೂಡಲೇ ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜೀಪಿನಿಂದ ಮೃತಪಟ್ಟ ಶವಗಳನ್ನು ಹೊರತೆಗೆದು ಶವಗಾರಕ್ಕೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.