ಧಾರವಾಡ: ಆತ ವೃತ್ತಿಯಿಂದ ಶಿಕ್ಷಕರಾಗಿದ್ದರೂ ಆ ವೃತ್ತಿಗೆ ರಾಜೀನಾಮೆ ಕೊಟ್ಟು ಸಮಾಜಕ್ಕೊಂದು ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇಟ್ಟುಕೊಂಡ ವ್ಯಕ್ತಿ. ಬದಲಾದ ಕಾಲಘಟ್ಟದಲ್ಲಿ ನಾವೆಲ್ಲ ವಿಷಕಾರಿ ಗಾಳಿಯಲ್ಲೇ ಉಸಿರಾಡುವಂತಾಗಿದೆ. ಪರಿಸರದ ಬಗ್ಗೆ ನಮಗೆಲ್ಲ ಕಿಂಚಿತ್ತೂ ಕಾಳಜಿಯೇ ಇಲ್ಲದಂತಾಗಿದೆ. ಅಭಿವೃದ್ಧಿಯ ನೆಪದಲ್ಲಿ ಮರಗಳ ಮಾರಣಹೋಮವೇ ನಡೆಯುತ್ತಿದೆ. ಹೀಗಾಗಿ ಮರ ಬೆಳೆಸಿ ಪರಿಸರ ಉಳಿಸಿ ಎಂಬ ಉದ್ದೇಶದೊಂದಿಗೆ ಯುವಕನೊಬ್ಬ ತನಗಿದ್ದ ಶಿಕ್ಷಕ ವೃತ್ತಿಯನ್ನೇ ಬಿಟ್ಟು ದೇಶದಾದ್ಯಂತ ಪಾದಯಾತ್ರೆ ಮಾಡುವ ಮೂಲಕ ಪರಿಸರ ಮತ್ತು ಮರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ.
ಹೌದು! ದೃಶ್ಯಗಳಲ್ಲಿ ನೀವು ನೋಡುತ್ತಿರುವ ಈ ಯುವಕನ ಹೆಸರು ಅಶುತೋಷ್ ಪಾಂಡೆ. ಮೂಲತಃ ಉತ್ತರ ಪ್ರದೇಶದವನು. ವೃತ್ತಿಯಿಂದ ಶಿಕ್ಷಕನಾದರೂ ಪರಿಸರದ ಮೇಲೆ ತನಗಿರುವ ಕಾಳಜಿ ಇತರರಿಗೂ ಹುಟ್ಟಲಿ ಎಂಬ ಉದ್ದೇಶದಿಂದ ಶಿಕ್ಷಕ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅದೇ ಹಣದಿಂದ ಇದೀಗ ಪಾದಯಾತ್ರೆಯ ಮೂಲಕವೇ ದೇಶಪರ್ಯಟನೆ ಮಾಡುವ ಮೂಲಕ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ. ಒಟ್ಟು 21 ರಾಜ್ಯಗಳಲ್ಲಿ ಸುತ್ತಿ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಪರಿಸರ ಉಳಿಸುವ ಮತ್ತು ಸಸಿಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಅಶುತೋಷ್ ಅವರದ್ದಾಗಿದೆ. ಈಗಾಗಲೇ ಅನೇಕ ರಾಜ್ಯಗಳನ್ನು ಸುತ್ತಿ ಅಶುತೋಷ್ ಕರ್ನಾಟಕದ ಧಾರವಾಡಕ್ಕೂ ಬಂದಿದ್ದರು.

Shocking News: ಅಯ್ಯೋ.. 8 ವರ್ಷದ ಬಾಲಕಿ ಮೇಲೆ 9 ವರ್ಷದ ಬಾಲಕನಿಂದ ಅತ್ಯಾಚಾರ..!
ಇಲ್ಲಿನ ಜಿಲ್ಲಾಧಿಕಾರಿಗಳಿಗೂ ಭೇಟಿಯಾಗಿ ತಮ್ಮ ಪಾದಯಾತ್ರೆಯ ಉದ್ದೇಶ ತಿಳಿಸಿದ್ದಾರೆ. ಒಟ್ಟು 16 ಸಾವಿರ ಕಿಲೋ ಮೀಟರ್ ಸಂಚರಿಸುವ ಪಾದಯಾತ್ರೆ ಇವರದ್ದಾಗಿದ್ದು, 2022ರ ಡಿ.4 ರಂದು ಅಯೋಧ್ಯೆಯಿಂದ ಈ ಪಾದಯಾತ್ರೆ ಆರಂಭವಾಗಿದೆ. 2026ಕ್ಕೆ ಅಶುತೋಷ್ ಅವರ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. 1ನೇ ತರಗತಿಯಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಮಗುವಿಗೂ ಒಂದೊಂದು ಸಸಿ ನೀಡುವ ಯೋಜನೆಯನ್ನು ಆಯಾ ರಾಜ್ಯ ಸರ್ಕಾರಗಳು ಮಾಡಬೇಕು ಎಂಬುದು ಇವರ ಉದ್ದೇಶವಾಗಿದೆ. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅಶುತೋಷ್ ಪತ್ರ ಬರೆದಿದ್ದು ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ.
ಕರ್ನಾಟಕದಿಂದ ಗೋವಾ, ದೆಹಲಿ, ಜಮ್ಮು, ಲಡಾಖ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಶುತೋಷ್ ತೆರಳಲಿದ್ದಾರೆ. ತಮ್ಮದೇ ಸ್ವಂತ ಹಣ ಖರ್ಚು ಮಾಡಿ ಈ ರೀತಿ ಪಾದಯಾತ್ರೆ ಮಾಡುವ ಮೂಲಕ ಮರ ಬೆಳೆಸಿ ಎಂಬ ಸಂದೇಶವನ್ನು ಸಾರುತ್ತಿರುವ ಈ ಅಶುತೋಷನಂತಹ ಯುವಕರು ಇತರರಿಗೆ ಮಾದರಿ. ಸರ್ಕಾರಗಳು ಇಂತವರ ಪ್ರಯತ್ನಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರ ಸಲಹೆಗಳನ್ನು ಮುಂದಿನ ಪರಿಸರದ ಉಳಿವಿಗಾಗಿ ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ.

