ತುಮಕೂರು : ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದು, ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ತುಮಕೂರಿನ ಶಿರಾ ಅಮರಾಪುರ ರಸ್ತೆಯ ಲಿಂಗದಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ತೊಗರುಗುಂಟೆ ಗ್ರಾಮದ ಮೋಹನ್ ಎಂಬಾತನೇ ಮೃತ ಯುವಕ.
ಶಿರಾ- ಅಮರಾಪುರ ರಸ್ತೆ ಪೂರ್ತಿ ಗುಂಡಿಗಳೇ ಬಿದ್ದಿದ್ದು, ಈ ಬಗ್ಗೆ ಸುತ್ತಮುತ್ತಲ ಗ್ರಾಮಸ್ಥರು ಹಲವು ಬಾರಿ ದೂರುಗಳನ್ನು ನೀಡಿದರೂ ಮಾತ್ರ ನಗರಸಭೆಯ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ. ಇದೀಗ ಇದೇ ಗುಂಡಿಗಳಿಗೆ ಓರ್ವ ಬಲಿಯಾಗಿದ್ದಾನೆ. ರಸ್ತೆಯುದ್ದಕ್ಕೂ ಗುಂಡಿಗಳು ಬಿದಿದ್ದು, ರಾತ್ರಿ ಹೊತ್ತಿನಲ್ಲಿ ಕಾಣದೇ ಎಷ್ಟೋ ಬೈಕ್ ಸವಾರರು ಬಿದಿದ್ದಾರೆ.
ಹೀಗಾಗಿ ತೊಗರುಗುಂಟೆಯಲ್ಲಿ ನೂರಾರು ಜನ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಮೃತನ ಭಾವಚಿತ್ರದ ಪ್ಲೆಕ್ಸ್ ಹಿಡಿದು ಶಿರಾ ಅಮರಾಪುರ ರಸ್ತೆ ಶೀಘ್ರ ದುರಸ್ತಿಗೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.