ಬಿಗ್ ಬಾಸ್ (Bigg Boss Kannada) ಮನೆಯ ಬಣ್ಣದ ಟಾಸ್ಕ್ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿನಯ್ ಮತ್ತು ಅವಿನಾಶ್ ಶೆಟ್ಟಿ (Avinash Shetty) ಜಗಳ ತಾರಕಕ್ಕೇರಿದ್ದು, ಇದರ ಮುಂದುವರಿಕೆಯಾಗಿ ವಿನಯ್ (Vinay) ಬೆರಳು ಮುರಿದುಕೊಂಡಿದ್ದಾರೆ. ಕಾರ್ತಿಕ್ ಮತ್ತು ಅವಿನಾಶ್ ನಡುವೆ ನಡೆದ ಕಾಳಗದಲ್ಲಿ ಕಾರ್ತಿಕ್ (Karthik) ಏಟು ಮಾಡಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಬಣ್ಣದ ಟಾಸ್ಕ್ನಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿಯೇ ನಡೆದಿದೆ ಎನ್ನುವುದು ಹರಿದಾಡುತ್ತಿರುವ ಸುದ್ದಿ.
ತನಿಷಾ ಮತ್ತು ಸಂಗೀತಾ ಇಬ್ಬರ ತಂಡಗಳ ಸದಸ್ಯರನ್ನು ನೋಡಿದಾಗ ಗ್ಯಾರಂಟಿ ಜಗಳ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ತನಿಷಾ ಕಡೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ. ಸಂಗೀತಾ ಅವರ ಟೀಮ್ನಲ್ಲಿ ಇರೋದು ಅಷ್ಟೇನೂ ಬಲಿಷ್ಠರಲ್ಲದ ಪಡೆ. ಹೀಗಾಗಿ ಕಾರ್ತಿಕ್ ಮತ್ತು ವಿನಯ್ ಗೆಲ್ಲುವುದಕ್ಕಾಗಿ ಏನು ಬೇಕಾದರೋ ಮಾಡೋಕೆ ರೆಡಿ ಎನ್ನೋದು ಗೊತ್ತಿರೋ ವಿಚಾರ. ಇವತ್ತು ಟಾಸ್ಕ್ನಲ್ಲಿ ಅದೇ ಆಗಿದೆ. ಹಾಗಾಗಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಏಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಣ್ಣ ಮತ್ತು ಬಟ್ಟೆ ಟಾಸ್ಕ್ನಲ್ಲಿ ಬೆಳ್ಳಂಬೆಳಗ್ಗೆ ಗುದ್ದಾಟ ನಡೆದಿತ್ತು. ಅದರ ಪ್ರೊಮೋ ಕೂಡ ರಿಲೀಸ್ ಆಗಿತ್ತು. ಕಾರ್ತಿಕ್, ವಿನಯ್ ಮತ್ತು ಅವಿನಾಶ್ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಆಟ ಆಡುತ್ತಿದ್ದರು. ವಿನಯ್ ತುಂಬಾನೇ ಅಗ್ರೆಸಿವ್ ಆಗಿ ಆಟ ಆಡುತ್ತಿದ್ದರು. ಅವಿನಾಶ್ ಮೇಲೆ ಮುಗಿಬಿದ್ದಿದ್ದರು. ವಿನಯ್ ನಡೆ ಸ್ವತಃ ಅವರ ಟೀಮ್ಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಆಟ ಮತ್ತು ಅದಕ್ಕೆ ಕಾರ್ತಿಕ್ ನೀಡಿದ್ದ ಸಾಥ್ ಅನಾಹುತಕ್ಕೆ ಕಾರಣವಾಗಿದೆಯಂತೆ.
ಬಲ್ಲ ಮೂಲಗಳ ಪ್ರಕಾರ ಕಾರ್ತಿಕ್ ಆಸ್ಪತ್ರೆ ಸೇರಿದ್ದಾರೆ. ವಿನಯ್ ಅವರ ಬೆರಳು ಮೂಳೆ ಮುರಿತವಾಗಿದೆ. ಅವಿನಾಶ್ ಕೂಡ ಏಟು ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಇದೆಲ್ಲವೂ ಕಾಮನ್ ಆದರೂ, ಇವತ್ತು ಮತ್ತು ಈ ಹಿಂದೆ ಗಂಧರ್ವರು ಹಾಗೂ ರಾಕ್ಷಸರ ನಡುವಿನ ಟಾಸ್ಕ್ ಇಂಥದ್ದೇ ಜಗಳಕ್ಕೆ ಕಾರಣವಾಗಿತ್ತು. ಅವತ್ತು ಕೂಡ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಆಸ್ಪತ್ರೆ ಪಾಲಾಗಿದ್ದರು. ಈಗ ಕಾರ್ತಿಕ್ ಸರದಿಯಾಗಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.