ಬೆಂಗಳೂರು :- ಅರಮನೆ ಮೈದಾನದಲ್ಲಿ ಈಡಿಗರ ಶಕ್ತಿ ಪ್ರದರ್ಶನ ಜರುಗಿದ್ದು, ಕಾಂಗ್ರೆಸ್ಗೆ ಶಕ್ತಿ ತುಂಬಲು ಈಡಿಗರು ಶ್ರಮಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಈಡಿಗ, ಬಿಲ್ಲವ, ನಾಮಧಾರಿ ಸೇರಿ ಎಲ್ಲ 26 ಪಂಗಡಗಳ ಬೃಹತ್ ಜಾಗೃತ ಹಾಗೂ ಸ್ವಾಭಿಮಾನಿ ಸಮಾವೇಶ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆ ಮತ್ತು ಪರೋಕ್ಷವಾಗಿ ರಾಜಕೀಯ ಸಂದೇಶ ರವಾನೆಗೆ ವೇದಿಕೆಯಾಗಿ ಬದಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ ಸಹಿತ ಈಡಿಗ ಸಮುದಾಯದ ಬಹುತೇಕ ಶಾಸಕರು, ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಸಮುದಾಯದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೈರಾಗಿದ್ದರು.
ವೇದಿಕೆಯಲ್ಲಿದ್ದ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ ಸಹಿತ ಈಡಿಗ ಸಮುದಾಯದ ಮುಖಂಡರೆಲ್ಲರೂ ಈಡಿಗರ ಅಭಿವೃದ್ಧಿಗಾಗಿ ಸರಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು. ಮುಖ್ಯವಾಗಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮುಂತಾದ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವು ದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಬೇಡಿಕೆಗಳ ಬಗ್ಗೆ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು