ಜೈಪುರ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಪ್ರೀತಿ (Online Relationship) ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಯುವಕರು, ಮಹಿಳೆಯರು, ವೃದ್ಧರೂ ಸೇರಿದಂತೆ ಅನೇಕರು ಪ್ರೀತಿಯ ಮೋಹಕ್ಕೆ ಬಿದ್ದು ಬಲಿಯಾಗುತ್ತಿದ್ದಾರೆ. ಯುವಕರು ಚೆಂದದ ಹುಡುಗಿಯನ್ನು ಪಟಾಯಿಸಲು ನಾನಾ ತಂತ್ರಗಳನ್ನ ಹೆಣೆಯುತ್ತಾರೆ. ಅದಕ್ಕೆ ಸೊಪ್ಪು ಹಾಕುವ ಹುಡುಗಿಯರೂ ಆತನ ಜೊತೆ ಗಂಟೆಗಟ್ಟಲೆ ಮೆಸೇಜ್ ಮಾಡಲು, ಊರು ಸುತ್ತಲು ಈಗ ಆನ್ಲೈನ್ ಡೇಟಿಂಗ್ ಆ್ಯಪ್ಗಳು (Dating Apps) ಏಣಿಯಾಗಿವೆ.
ಆದ್ರೆ ದೆಹಲಿಯಲ್ಲಿ (Delhi) ದುಷ್ಯಂತ ಎಂಬ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಜೈಪುರಕ್ಕೆ ಹೋಗಿ ಕೊಲೆಯಾಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ನ್ಯಾಯಾಲಯವು (Jaipur Court) ಚೆಲುವೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಷನ್ಸ್ ನ್ಯಾಯಾಧೀಶ ಅಜಿತ್ ಕುಮಾರ್ ಹಿಂಗರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
2018ರಲ್ಲಿ ಡೇಟಿಂಗ್ ಆಪ್ವೊಂದರಲ್ಲಿ ದೆಹಲಿಯ ದುಷ್ಯಂತ್ ಶರ್ಮಾ (ಪ್ರೊಫೈಲ್ ಹೆಸರು) ಹಾಗೂ ಜೈಪುರದ ಪ್ರಿಯಾ ಸೇಠ್ ಎಂಬಾಕೆಯೊಂದಿಗೆ ಪರಿಚಯವಾಗಿದೆ. ಇಬ್ಬರೂ ಚಾಟ್ ಮಾಡಿದಾಗ ಪರಸ್ಪರರ ಅಭಿವೃದ್ಧಿಗಳಿಗೆ ಸಾಮ್ಯತೆ ಇದೆ ಎಂಬುದು ಗೊತ್ತಾಗಿದೆ. 3 ತಿಂಗಳ ಬಳಿಕ ಇಬ್ಬರೂ ಭೇಟಿ ಆಗಲು ನಿರ್ಧರಿಸಿದ್ದಾರೆ. ಜೈಪುರಕ್ಕೆ ಬಾ ಎಂದು ಪ್ರಿಯಾ ಸೇಠ್ ಕರೆದಿದ್ದಾಳೆ. ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ, ಇಲ್ಲಿಗೇ ಬಾ ಎಂದು ಆಹ್ವಾನಿಸಿದ್ದಾಳೆ. ನೆಚ್ಚಿನ ಪ್ರಿಯತಮೆಯ ಭೇಟಿಗೆ ಕಾದಿದ್ದ ದುಷ್ಯಂತ್ ಶರ್ಮಾ ಜೈಪುರಕ್ಕೆ ಹೋಗಿದ್ದಾರೆ.
ದುಷ್ಯಂತ್ ಶರ್ಮಾ ಅವರು ಜೈಪುರದಲ್ಲಿರುವ ಪ್ರಿಯಾ ಸೇಠ್ ಅವರ ಬಾಡಿಗೆ ಮನೆ ಪ್ರವೇಶಿಸಿದ ನಂತರ ಆಗಿದ್ದೇ ಬೇರೆ. ಪ್ರಿಯಾ ಸೇಠ್, ದೀಕ್ಷಂತ್ ಕಮ್ರಾ ಹಾಗೂ ಲಕ್ಷ್ಯಾ ವಾಲಿಯಾ ಎಂಬುವರು ದುಷ್ಯಂತ್ ಶರ್ಮಾ ಅವರನ್ನು ಅಪಹರಣ ಮಾಡಿದ್ದಾರೆ. ದುಷ್ಯಂತ್ ಶರ್ಮಾ ಅವರ ತಂದೆಗೆ ಕರೆ ಮಾಡಿ, ನಿಮ್ಮ ಮಗ ಜೀವಂತವಾಗಿ ಮನೆ ಸೇರಬೇಕಾದ್ರೆ 10 ಲಕ್ಷ ರೂ. ಕೊಡಬೇಕು ಎಂದಿದ್ದಾರೆ. ಆದ್ರೆ ದುಷ್ಯಂತ್ ತಂದೆ ನನ್ನ ಬಳಿ ಅಷ್ಟು ದುಡ್ಡು ಇಲ್ಲ, 3 ಲಕ್ಷ ಮಾತ್ರ ಕೊಡಲು ಸಾಧ್ಯ ಎಂದಿದ್ದಾರೆ.
ಇದೇ ವೇಳೆ ತಂದೆ ಜತೆ ಮಾತನಾಡಿದ ದುಷ್ಯಂತ್ ಶರ್ಮಾ, ಅಪ್ಪಾ ಇವರು ತುಂಬ ಟಾರ್ಚರ್ ಮಾಡುತ್ತಿದ್ದಾರೆ. ನೀವು ಹಣ ಕೊಡದಿದ್ದರೆ ಕೊಂದೇ ಬಿಡುತ್ತಾರೆ ಎಂದು ಅಂಗಲಾಚಿದ್ದಾರೆ. ಆದರೆ, ದುಷ್ಯಂತ್ ಶರ್ಮಾ ಅವರ ತಂದೆಗೆ ಹಣ ಹೊಂದಿಸಲು ಆಗದ ಕಾರಣ, ಮೂವರೂ ದುಷ್ಕರ್ಮಿಗಳು ದುಷ್ಯಂತ್ ಶರ್ಮಾ ಅವರನ್ನು ಕ್ರೂರವಾಗಿ ಕೊಂದಿದ್ದಾರೆ.
ದುಷ್ಯಂತ್ ಹೇಳಿದ ಸುಳ್ಳೇ ಕೊಲೆಗೆ ಕಾರಣವಾಯ್ತಾ?
ದುಷ್ಯಂತ್ ಶರ್ಮಾ ಅವರ ಹೆಸರು ನಕಲಿ ಆಗಿದೆ. ಅವರ ನಿಜವಾದ ಹೆಸರು ವಿವಾನ್ ಕೊಹ್ಲಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಾನು ದೊಡ್ಡ ಉದ್ಯಮಿ ಎಂಬುದಾಗಿ ಪ್ರಿಯಾ ಸೇಠ್ಗೆ ಸುಳ್ಳು ಹೇಳಿದ್ದಾನೆ. ಅಷ್ಟೇ ಅಲ್ಲ, ಮದುವೆಯಾಗಿರುವುದನ್ನೂ ಮುಚ್ಚಿಟ್ಟು, ಪ್ರಿಯಾ ಸೇಠ್ಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ. ಯಾವಾಗ ದುಷ್ಯಂತ್ ಶರ್ಮಾ ದೊಡ್ಡ ಉದ್ಯಮಿ ಎಂಬುದನ್ನು ಕೇಳಿದಳೋ, ಪ್ರಿಯಾ ಸೇಠ್ಗೆ ಹಣದ ಆಸೆ ಹುಟ್ಟಿದೆ. ಹಾಗಾಗಿಯೇ,
ಜೈಪುರಕ್ಕೆ ಕರೆಸಿ, ಅಪಹರಣ ಮಾಡಿದ್ದಾಳೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಆದರೆ, ದುಷ್ಯಂತ್ ಶರ್ಮಾ ಬಡವ ಎಂದು, ಆತನ ತಂದೆ ಹಣ ಕೊಡಲು ಆಗುವುದಿಲ್ಲ ಎಂದು ಗೊತ್ತಾದ ಕೂಡಲೇ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಕೊನೆಗೆ ಮೂವರೂ ಅಪರಾಧಿಗಳು ಎಂದು ತೀರ್ಪಿತ್ತ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.