ಯಾದಗಿರಿ : ವಿಧವೆ ಮಹಿಳೆಯನ್ನು ಮದುವೆಯಾಗುವುದಾಗಿ ವಂಚಿಸಿರುವ ಘಟನೆ ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಬಳಿಕ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನು ಮಾರಿ ಹಣವನ್ನು ವಂಚಿಸಿರುವುದಾಗಿ ಆರೋಪಿಸಿರುವ ಮಹಿಳೆ ಯಾದಗಿರಿ ಎಸ್ಪಿ ಕಚೇರಿ ಎದುರು ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದ ಸುವರ್ಣಾ ವಂಚನೆಗೊಳಗಾಗಿದ್ದು, ತಡಿಬಿಡಿ ಗ್ರಾಮದ ಮಾಳಪ್ಪ ಹತ್ತಕುಣಿ ಎಂಬುವನ ವಿರುದ್ಧ ವಂಚಿಸಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಸುವರ್ಣ ಪತಿ ನಿಧನರಾಗಿದ್ದು, ತನಗಿರುವ ಕಷ್ಟದ ಬಗ್ಗೆ ಅಬ್ಬೆತುಮಕೂರಿನ ಸ್ವಾಮೀಜಿ ಬಳಿ ಅಳಲು ತೋಡಿಕೊಂಡಿದ್ದಳು. ಅದೇ ಅಬ್ಬೆತುಮಕೂರು ಮಠದಲ್ಲೇ ಮಾಳಪ್ಪ ಹತ್ತಿಕುಣಿಯ ಪರಿಚಯವಾಗಿದೆ. ನಂತರ ಮಾಳಪ್ಪ ಹಾಗೂ ಸುವರ್ಣಾ ನಡುವೆ ಅತ್ಯಾಪ್ತ ಸಂಪರ್ಕ ಬೆಳೆದಿದೆ. ಸುವರ್ಣಾಗೆ ಬಾಳು ಕೊಡುತ್ತೇನೆಂದು ನಾಟಕವಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ.
ಅದು ಅಲ್ಲದೇ ಸುವರ್ಣಾ ತೆಲಂಗಾಣದ ನಾರಾಯಣಪೇಟದಲ್ಲಿ 4 ಎಕರೆ ಜಮೀನನ್ನು ಹೊಂದಿದ್ದಳು. ನಂತರ ಕೂಡಿ ಬಾಳೋಣ ಅಂತ ನಂಬಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನನ್ನು ಮಾರಿ ಹಣ ತೆಗೆದುಕೊಂಡು ವಂಚಿಸಿದ್ದಾನೆ. ಈ ಸಂಬಂಧ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ವಂಚನೆಗೊಳಗಾದ ಮಹಿಳೆ ಎಸ್ಪಿ ಕಚೇರಿಗೆ ಡಿಸೇಲ್ ಬಾಟಲ್ ಸಮೇತ ಬಂದಿದ್ದು, ನ್ಯಾಯ ಸಿಗದಿದ್ದರೆ ಡೀಸೆಲ್ ಸುರಿದುಕೊಂಡು ಸಾಯತ್ತೇನೆಂದು ಕಣ್ಣೀರು ಹಾಕಿದ್ದಾರೆ.