ಅಯೋಧ್ಯೆಯಲ್ಲಿ ಕನ್ನಡದ ಹಾಡು ಮೊಳಗಲಿದ್ದು, ಹಾಡು ರಚನಾಕಾರರಿಗೆ ಇದು ಹೆಮ್ಮೆಯ ವಿಷಯವಾಗಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶ, ವಿದೇಶಗಳಿಂದ ಕಾಣಿಕೆಗಳು ಹರಿದುಬರುತ್ತಿದೆ. ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕರ್ನಾಟಕದ ಜನತೆ ಖುಷಿಪಡುವ ಸುದ್ದಿಯೊಂದು ಹೊರಬಿದ್ದಿದೆ. ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಅಯೋಧ್ಯೆಯಲ್ಲಿ ಕನ್ನಡದ ಹಾಡು ಮೊಳಗಲಿದೆ.
ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಲೋಕಾರ್ಪಣೆ ವೇಳೆ ಕನ್ನಡದ ಹಾಡು ಮೊಳಗಲಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ.
ಈ ಕುರಿತು ಅಯೋಧ್ಯೆ ಟ್ರಸ್ಟ್ ಎಕ್ಸ್ನಲ್ಲಿ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ಈ ಕುರಿತು ಡಾ.ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದು, ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು.