ಬೆಂಗಳೂರು: ವಿದೇಶಿ ಪ್ರಯಾಣದಿಂದ ಡಿಸೆಂಬರ್ 12 ರಂದು ಬೆಂಗಳೂರಿಗೆ ಮರಳಿದ್ದ ಮಹಿಳೆ ಹಾಗೂ ಅವರ ಕುಟುಂಬದ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜೀನೋಮ್ ಸೀಕ್ವೆನ್ಸಿಂಗ್ ನಡೆಸಿದಾಗ ಅವರಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ಇರುವುದು ದೃಢಪಟ್ಟಿದೆ. ಎಲ್ಲರಿಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತರಾದ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಸೋಂಕಿತರು ಕೋರಮಂಗಲದ ಮೂರನೇ ಬ್ಲಾಕ್ನಲ್ಲಿರುವ ರಹೇಜ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದಾರೆ. ಅಪಾರ್ಟ್ಮೆಂಟ್ ನ ಕ್ಲಸ್ಟರ್ ಮಾಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯ ಫ್ಲಾಟ್ ನಿವಾಸಿಗಳಿಗೂ ಬಿಬಿಎಂಪಿ ಕೋವಿಡ್ ಟೆಸ್ಟ್ ನಡೆಸುತ್ತಿದೆ, ಬಹುತೇಕ ಸೆಕೆಂಡರಿ ಕಾಂಟ್ಯಾಕ್ಟ್ ನವರ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಈ ಮೂಲಕ ಒಟ್ಟಾರೆ ರಾಜ್ಯದಲ್ಲಿ ಒಮಿಕ್ರಾನ್ ಕೋವಿಡ್ ತಳಿ ಪ್ರಕರಣ 19 ರಿಂದ 23 ಕ್ಕೆ ಏರಿಕೆಯಾದಂತಾಗಿದೆ.
