ಧಾರವಾಡ: ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ದನಕರುಗಳ ಬಿಟ್ಟು ನಾಶ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಗ್ರಹಿಸಿ ಧಾರವಾಡದ ಯರಿಕೊಪ್ಪ ರೈತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರೈತರು ಹಸು ಮೇಯಿಸಲು ಬರುವ ಕಿಡಿಗೇಡಿಗಳ ಹಾಗೂ ದನಗಳ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಈಗಾಗಲೇ ಮುಂಗಾರು ಮಳೆ ಸಕಾಲಕ್ಕೆ ಬಾರದೇ ಮೊದಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪಸ್ವಲ್ಪ ಬಂದ ಮಳೆಗೆ ಹಾಗೂ ಬೋರವೆಲ್ ನೀರಿನ ಸಹಾಯದಿಂದ ಯರಿಕೊಪ್ಪ ಗ್ರಾಮಸ್ಥರು ತಮ್ಮ ಕೃಷಿ ಭೂಮಿಯಲ್ಲಿ ಮುಂಗಾರು ಬಿತ್ತನೆ ಮಾಡಿದ್ದಾರೆ. ಈಗ ಬೆಳೆ ಮೊಳಕೆ ಒಡೆದು ಮೇಲೆಳುತ್ತಿರುವ ಸಂದರ್ಭದಲ್ಲಿ ಗ್ರಾಮದ ಹತ್ತಿರದಲ್ಲಿರು ತಡಸಿಕೊಪ್ಪ ಹಾಗೂ ಜೋಗೊಯಲ್ಲಪ್ಪರದ ದನಕರಗಳು ನಮ್ಮ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಹಾಗಾಗಿ ಈ ಎರಡು ಗ್ರಾಮದ ಜಾನುವಾರು ಸಾಕಾಣಿಕೆದಾರರಿಗೆ ತಿಳಿ ಹೇಳಿ ನಮ್ಮ ಬೆಳೆ ರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದೆ ಆಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ಈ ವೇಳೆ ರೈತರು ಎಚ್ಚರಿಕೆ ನೀಡಿದರು.
