ರಾಯಚೂರು : ಮೃತದೇಹ ಸಾಗಣೆ ವೇಳೆ ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ರಾಯಚೂರು ತಾಲೂಕಿನ ಆಶಾಪುರ ಗ್ರಾಮದ ಮಾರ್ಗದಲ್ಲಿ ಘಟನೆ ನಡೆದಿದೆ.
ರಾಯಚೂರು ನಗರದಿಂದ ಆಶಾಪುರಕ್ಕೆ ಮೃತದೇಹ ಸಾಗಿಸಲಾಗುತ್ತಿತ್ತು. ಮೃತದೇಹದ ಜೊತೆಗಿದ್ದ ಮೂವರು ಕುಟುಂಬಸ್ಥರು, ಚಾಲಕ ಸೇರಿ ನಾಲ್ವರು ಆ್ಯಂಬುಲೆನ್ಸ್ ನಲ್ಲಿದ್ದರು. ಈ ವೇಳೆ ಆ್ಯಂಬುಲೆನ್ಸ್ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ.. ಅಂಬುಲೆನ್ಸ್ ನಲ್ಲಿ ದಟ್ಟವಾದ ಹೊಗೆ,ಬೆಂಕಿ ಕಾಣಿಸಿಕೊಂಡ ಕೂಡಲೇ ಆ್ಯಂಬುಲೆನ್ಸ್ ನಿಲ್ಲಿಸಿ ಪ್ರಯಾಣಿಕರು ಮೃತದೇಹ ಸಮೇತ ಕೆಳಕ್ಕೆ ಹಾರಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಆ್ಯಂಬುಲೆನ್ಸ್ನ ಸಂಪೂರ್ಣ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಆ್ಯಂಬುಲೆನ್ಸ್ನಲ್ಲಿದ್ದ ನಾಲ್ವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೊಂದೆಡೆ ಘಟನಾ ಸ್ಥಳಕ್ಕೆ ಬರಲು ಅಗ್ನಿಶಾಮಕ ಸಿಬ್ಬಂದಿ ವಿಳಂಬ ಮಾಡಿದ್ದಾರೆ ಅಂತ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ನಗರದ ಹೊರ ಭಾಗಕ್ಕೆ ಬರಲು ಫೈರ್ ಇಂಜಿನ್ ಇಲ್ಲ, ಇರೋ ಒಂದು ಇಂಜಿನ್ ಬೇರೆ ಕಾರ್ಯಾಚರಣೆ ಹೋಗಿದೆ ಅಂತ ಉಡಾಫೆ ಉತ್ತರ ಕೊಟ್ಟಿದ್ದಾರೆ ಅಂತ ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದರು.