ಬೆಂಗಳೂರು:- ನಗರದ ನಾಯಂಡಹಳ್ಳಿ ಬಳಿಯ ಗಂಗೊಂಡನಹಳ್ಳಿ ಸಮೀಪದಲ್ಲಿ ಆಟೋ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಜರುಗಿದೆ.
ತಡರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದ್ದು 40 ರಿಂದ 50 ಆಟೋಗಳು ಅಗ್ನಿಗಾಹುತಿ ಆಗಿವೆ. ಮನೆ ಮುಂದೆ ಜಾಗ ಇಲ್ಲ ಅಂತ ಶೆಡ್ನಲ್ಲಿ ಪಾರ್ಕಿಂಗ್ ಫೀಸ್ ಕೊಟ್ಟು ಆಟೋ ನಿಲ್ಲಿಸುತ್ತಿದ್ದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಸ್ಥಳದಲ್ಲಿದ್ದ ಎಲ್ಲಾ ಆಟೋಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಈಗ ಹೀಗೆ ಆಗಿದೆ ಏನ್ ಮಾಡೋದು ಆಟೋ ಮಾಲೀಕರು ಕಂಗಾಲಾಗದ್ದಾರೆ. ರಿಜ್ವಾನ್ ಎಂಬಾತನಿಗೆ ಸೇರಿರೋ ಶೆಡ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಹರಸಾಹಸ ಮಾಡಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ಬೆಂಕಿ ಅತೋಟಿಗೆ ತಂದಿದ್ದಾರೆ.
ಜೀವನಕ್ಕೆ ಆಧಾರವಾಗಿದ್ದ ಆಟೋಗಳನ್ನು ಕಳೆದುಕೊಂಡ ಚಾಲಕರು ಕಂಗಾಲಾಗಿದ್ದು, ಕಷ್ಟ ಪಟ್ಟು ದುಡೀತಾ ಇದೀವಿ ಹೀಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆಟೋ ನಿಲ್ಲಿಸಿ ಮನೆಗೆ ಹೋಗಿದ್ವಿ ಈತರ ಆಗಿದೆ. ಮನೆ ಮುಂದೆ ಜಾಗ ಇಲ್ಲ ಅಂತ ದುಡ್ಡು ಕೊಟ್ಟು ನಾವು ನಿಲ್ಲಿಸ್ತಾ ಇದ್ವಿ, ಈಗ ಹೀಗೆ ಆಗಿದೆ ಏನ್ ಮಾಡೋದು ಅಂತ ಆಟೋ ಮಾಲೀಕರು ಕಣ್ಣೀರಿಟ್ಟಿದ್ದಾರೆ.