ಬೆಂಗಳೂರು:– ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು, ‘ಪಂಚರಾಜ್ಯ ಚುನಾವಣೆ ನಂತರ ಪಕ್ಷದ ಹೈಕಮಾಂಡ್ ಶಾಸಕರ ರಕ್ಷಣೆ ಜವಾಬ್ದಾರಿ ನೀಡಿದೆಯೇ ಎಂದು ಪ್ರಶ್ನೆ ಕೇಳಿದಾಗ ಅದಕ್ಕೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.
“ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ನನಗಿದೆ. ಶಾಸಕರು ಎಲ್ಲೂ ಹೋಗುವುದಿಲ್ಲ. ಅವರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಆ ಬಗ್ಗೆ ನನಗೆ ಇದುವರೆಗೂ ಯಾವುದೇ ಜವಾಬ್ದಾರಿ ನೀಡಿಲ್ಲ. ತೆಲಂಗಾಣ ಸೇರಿದಂತೆ ಕೆಲವು ಕಡೆ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಮ್ಮ ಪಕ್ಷದವರು ಸ್ಥಳೀಯ ಮಟ್ಟದಲ್ಲೇ ಇದನ್ನು ನಿಭಾಯಿಸುತ್ತಾರೆ” ಎಂದು ಕೇಳಿದರು.
ರಾಜಸ್ಥಾನದಲ್ಲಿ ತೀವ್ರ ಸ್ಪರ್ಧೆ ಇರುವ ಮುನ್ಸೂಚನೆ ಸಿಕ್ಕಿದೆ ಎಂದು ಕೇಳಿದಾಗ, “ನನಗೆ ನನ್ನದೇ ಆದ ಅಭಿಪ್ರಾಯವಿದೆ. ಮತಯಂತ್ರದಲ್ಲಿರುವ ಮತದ ಮಾಹಿತಿ ನಿಮಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. 48 ತಾಸುಗಳ ನಂತರ ಎಲ್ಲವೂ ಹೊರಬೀಳಲಿದೆ. ಈ ಸಮೀಕ್ಷೆಗಳು ಸುಮಾರು 10 ಸಾವಿರ ಮತದಾರರನ್ನು ಸಂಪರ್ಕಿಸಿ ಸಮೀಕ್ಷೆ ಮಾಡಲಾಗಿದೆ. ನಾವು ನಮ್ಮ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಾಗ 1 ಲಕ್ಷದಷ್ಟು ಜನರನ್ನು ಸಮೀಕ್ಷೆ ಮಾಡಿದ್ದೆವು. ತೆಲಂಗಾಣದಲ್ಲಿ ನಾನು 20 ಕ್ಷೇತ್ರ ಓಡಾಡಿದ್ದೇನೆ. ಬೇರೆ ಕ್ಷೇತ್ರಗಳಲ್ಲೂ ವರದಿ ಬಹಳ ಉತ್ತಮವಾಗಿದೆ” ಎಂದರು.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉಚಿತ ಕೊಡುಗೆಗಳನ್ನು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾರಾಯಣ ಮೂರ್ತಿ ಅವರ ಸಲಹೆ ಜನರ ಅಭಿವೃದ್ಧಿಯ ಭಾಗವಾಗಿದೆ. ಅಂತಿಮವಾಗಿ ಸರ್ಕಾರದ ನಿರ್ಧಾರ ಅಂತಿಮ. ಸರ್ಕಾರ ರೈತರು, ಬಡವರಿಗೆ ನೆರವಾಗಬೇಕು. ಬೆಲೆ ಏರಿಕೆ ಸಮಸ್ಯೆಯನ್ನು ಜನಸಾಮಾನ್ಯರು ಹೇಗೆ ಎದುರಿಸಬೇಕು. 70 ರೂ. ಇದ್ದ ಪೆಟ್ರೋಲ್ ಬೆಲೆ 110 ರೂ. ಆಗಿದೆ ಇಂತಹ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡಬೇಕು?” ಎಂದು ತಿಳಿಸಿದರು.