ಧಾರವಾಡ : ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ, ಬಡವರ ಏಳಿಗೆಯೇ ನನ್ನ ಗುರಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು ಕಲಘಟಗಿ ಪಟ್ಟಣದ ಮಡಕಿಹೊನ್ನಳ್ಳಿಯ ಅಮೃತ ನಿವಾಸದಲ್ಲಿ ತಮ್ಮ 50ನೇ ಜನ್ಮದಿನದ ಪ್ರಯುಕ್ತ ಸಂತೋಷ್ಲಾಡ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ತಾಲೂಕಿನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಆಶಾ ಹಾಗೂ ಕೃಷಿ ಸಖಿಯರಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಬೇಕಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕಿದೆ’ ಎಂದರು. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಜಾರಿಗೆ ಬಂದರೆ ಉದ್ಯೋಗ ಹಾಗೂ ಶಿಕ್ಷಣದ ಮೇಲೆ ಪರಿಣಾಮ ಬಿರುತ್ತದೆ. ಇದನ್ನು ಎದುರಿಸಲು ಸಿದ್ಧರಾಗಬೇಕು ಎಂದರು. ಕೆಲವರು ಸಾಮಾಜಿಕ ಸುಳ್ಳು ಸುದ್ದಿ ಹರಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯುವಜನರು ಇದಕ್ಕೆ ಕಿವಿಗೊಡಬಾರದು ಎಂದು ಯುವ ಜನತೆಗೆ ಕಿವಿಮಾತು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ದಾನ ಮಾಡಲು ಶ್ರೀಮಂತಿಕೆ ಬೇಕಿಲ್ಲ. ಸಹಾಯ ಮಾಡುವ ಮನಸ್ಸು ಮುಖ್ಯ. ಸಮಾಜದಲ್ಲಿರುವ ಬಡವರು, ನಿರ್ಗತಿಕರಿಗೆ ನಮ್ಮ ಕೈಲಾದ ಸಹಾಯ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆದವು. ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ತಹಶೀಲ್ದಾರ್ ವೀರೇಶ ಮುಳಗುಂದಮಠ, ತಾಲೂಕು ಪಂಚಾಯಿತಿಯ ಪರಶುರಾಮ ಸಾವಂತ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಪಂಚಾಯಿತಿ, ಪಂಚಾಯಿತಿ ಪಾಟೀಲ ಅಧ್ಯಕ್ಷೆ ಶಿಲ್ಪಾ ಪಾಲ್ಕರ್, ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ್, ಜಿಲ್ಲಾ ಖಾತರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಉಪಸ್ಥಿತರಿದ್ದರು.