ಬೀದರ್ : ಪೋಷಕರ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತೈಗೈದಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀಧರ್ ಶಿವರಾಜ್ ಜೋಜನೆ (30) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಸವಿತಾ ಶ್ರೀಧರ್ ಜೋಜನೆ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ.
ಶ್ರೀಧರ್ ಐದು ವರ್ಷಗಳ ಹಿಂದೆ ಲಾದಾ ಗ್ರಾಮದ ಸವಿತಾಳನ್ನ ಪ್ರೀತಿಸಿ ಮದುವೆಯಾಗಿದ್ದ. ಆಗಾಗ ಕುಡಿದು ಬಂದು ಪತ್ನಿ ಸವಿತಾ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಫೆ.25ರಂದು ಬೆಳಗ್ಗೆ ಮನೆಯಲ್ಲಿ ಶ್ರೀಧರ್ & ಸವಿತಾಳ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಶ್ರೀಧರ್ ತಂದೆ ಶಿವರಾಜ್ ಇಬ್ಬರಿಗೂ ಬೈದು ಬುದ್ದಿ ಹೇಳಿದ್ದಾರೆ. ಆದರೆ ಇದಾದ ಬಳಿಕ ಸಂಜೆ ಮತ್ತೆ ಜೋರು ಗಲಾಟೆ ನಡೆದಿದ್ದು, ಗಂಡನ ಕೊಲೆಗೈದಿದ್ದಾಳೆ.
ಶ್ರೀಧರ್ ಮೇಲೆ ಪತ್ನಿ ಸವಿತಾ, ಅತ್ತೆ ವಿಜಯಲಕ್ಷ್ಮಿ, ಮಾವ ಶಶಿಕಾಂತ್ ಅವರಿಂದ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಶ್ರೀಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ಶಿವರಾಜ್ ಮೂವರ ವಿರುದ್ಧ ದೂರು ನೀಡಿದ್ದಾರೆ.