ಬೆಂಗಳೂರು:- ಬೇಸಿಗೆ ಬಂದರೆ ಸಾಕು ಎಳನೀರಿನ ಬೆಲೆ ಗಗನಕ್ಕೆ ಏರುತ್ತದೆ. ಆದರೆ, ಈ ಚಳಿಗಾಲದಲ್ಲೂ ಎಳನೀರಿನ ಬೆಲೆ ಅಧಿಕವಾಗಿದೆ. ಒಂದು ಎಳನೀರಿನ ಕಾಯಿಗೆ 40 ರಿಂದ 60 ರೂಪಾಯಿ ಇದೆ. ದಿಢೀರನೆ ಬೆಲೆ ಏರಿಕೆಯಿಂದ ಜನರು ಕಂಗಾಲ ಆಗಿದ್ದಾರೆ. ತೆಂಗಿನಕಾಯಿ ದರ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ 5 ಲಕ್ಷ FD ಇಟ್ರೆ ವರ್ಷಕ್ಕೆ ಸಿಗುವ ಬಡ್ಡಿ ಎಷ್ಟು?
ಏನ್ ಗುರು, ತೆಂಗಿನ ಕಾಯಿಗೆ ಇನ್ನಿಲ್ಲದ ಡಿಮಾಂಡ್ ಬಂದಿದೆ. ಎಷ್ಟು ಬೇಕಾದರೂ ದುಡ್ಡು ಕೊಡುತ್ತೇವೆ ಎಂದರೂ ಒಳ್ಳೆ ಕಾಯಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಸಾಧಾರಣ ತೆಂಗಿನ ಕಾಯಿಗೆ 50 ರೂಪಾಯಿ ಇದೆ. ಹಣ ಕೊಡುತ್ತೇನೆಂದರೂ ಕಾಯಿ ಇಲ್ಲದಂತಹ ಪರಿಸ್ಥಿತಿ ಬಂದಿದ್ದಾರೂ ಏಕೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಮಡಿಕೇರಿ, ಕೊಡಗು ಭಾಗಗಳಲ್ಲಿ ಪ್ರತಿ ಮನೆಯಲ್ಲಿ ತೆಂಗಿನಕಾಯಿ ಇಲ್ಲದೇ ಅಡಿಗೆ ಮಾಡೋದೇ ಇಲ್ಲ. ಆ ಭಾಗದ ಜನರಿಗೆ ತೆಂಗಿನಕಾಯಿ ಒಂದು ಸಮಸ್ಯೆಯಾಗಿದೆ. ಉತ್ತಮ ತೆಂಗಿನ ಕಾಯಿಗಳು ಮಾರುಕಟ್ಟೆಯಲ್ಲಿಲ್ಲ. 400-500 ಗ್ರಾಂ ತೂಗುವ ತೆಂಗಿನ ಕಾಯಿ ಮಂಗಮಾಯವಾಗಿದೆ. ಈಗ ಒಂದು ಕೆಜಿಗೆ ಮೂರು, ನಾಲ್ಕು ಬರುವ ಕಾಯಿಗಳ ಬೆಲೆಯೇ ಗಗನಕ್ಕೆ ಹೋಗಿದೆ.
ಮನೆಯಲ್ಲಿ, ಹೋಟೆಲ್ಗಳಲ್ಲಿ, ದೇವಾಲಯಗಳಲ್ಲಿ ತೆಂಗಿನ ಕಾಯಿ ಎಂದರೆ ಬೆಚ್ಚಿ ಬೀಳುವಂತಾಗಿದೆ. ಕಾಯಿ ಕಥೆ ಇದಾದರೆ, ಇನ್ನೂ ಉತ್ತಮ ಎಳನೀರಿಗೆ 60-70 ರೂ. ಕೇಳುತ್ತಿದ್ದಾರೆ ಮಾರಾಟಗಾರರು. ಹಿಡಿ ಗಾತ್ರದ ಎಳನೀರು 50-60 ರೂ.ವರೆಗೆ ಹೇಳುತ್ತಾರೆ. ಇದ್ದಕ್ಕಿದ್ದಂತೆ ತೆಂಗಿಗೆ ಈಗ ಶುಕ್ರ ದೆಸೆ ಬಂದಿದೆ. ಇನ್ನೂ ಐದಾರು ತಿಂಗಳು ಇದೇ ಸ್ಥಿತಿ ಇರಲಿದೆ ಅಂತಾರೆ ಮಾರುಕಟ್ಟೆ ವಿಶ್ಲೇಷಕರು. ಆದರೆ ಈ ಬೆಳವಣಿಗೆಯಿಂದ ಖುಷಿಯಾಗಿರಬೇಕಾದ ನಮ್ಮ ಭಾಗದ ತೆಂಗು ಬೆಳೆಗಾರ ಇನ್ನೂ ಸಪ್ಪೆ ಮುಖ ಹಾಕಿ ಕುಳಿತಿದ್ದಾರೆ. ತೆಂಗಿನ ಕಾಯಿ, ಎಳನೀರು ಬೆಲೆ ಗಗನದಲ್ಲಿದ್ದರೂ ಅವನ ಮುಖದಲ್ಲಿ ಮಾತ್ರ ಕಳೆಯೇ ಇಲ್ಲವಾಗಿದೆ. ಕಾರಣ ಕೊಬ್ಬರಿ ಬೆಲೆ ಬಿದ್ದೋಗಿದೆ ಅನ್ನೋದೇ ಆತಂಕದಲ್ಲಿ ಅವರ ದೃಷ್ಟಿ ಬೇರೆ ಕಡೆ ಹೋಗಿಲ್ಲ.
ಇಂದಿನ ಕೊಬ್ಬರಿ ಬೆಲೆ ನೂರು ಕೆಜಿಗೆ 14.350-14,500 ರೂ. ನಡುವೆ ಇದೆ. ತೆಂಗಿನ ಕಾಯಿಗೆ ಲೆಕ್ಕ ಹಾಕಿದರೆ ಕೊಬ್ಬರಿ ಬೆಲೆ ವೈಜ್ಞಾನಿಕವಾಗಿ ಪಾತಾಳಕ್ಕಿದೆ. ಕಾಯಿ ಬೆಲೆಗೆ ಹೋಲಿಕೆ ಮಾಡಿದರೆ, ಅಂದಾಜು 25,000 ರೂ. ಇರಬೇಕಿತ್ತು. ಉದಾಹರಣೆಗೆ ಒಂದು ಕೆಜಿಗೆ ಕೊಬ್ಬರಿಗೆ ಐದಾರು ಗಿಟುಕು ಬರುತ್ತೆ. ಬೆಲೆಯ ಲೆಕ್ಕದಲ್ಲಿ ಕೊಬ್ಬರಿ ಒಂದಕ್ಕೆ 30 ರೂ. ಸಿಗುತ್ತದೆ. ಆದರೆ ಒಂದು ಕಾಯಿಗೆ 40-50 ರೂ. ಬೆಲೆ ಇದೆ. ತೆಂಗಿನ ಕಾಯಿ ಬೆಲೆಗೆ ಲೆಕ್ಕ ಹಾಕಿದರೆ ಐದು ಕಾಯಿಗೆ 250 ರೂ. ಸಿಗುವ ಜೊತೆಗೆ ಒಂದು ವರ್ಷ ಸಮಯ ಉಳಿಯುತ್ತದೆ. ಅದೇ ಎಳನೀರಿಗೆ ಲೆಕ್ಕ ಹಾಕಿದರೆ ರೈತರ ತೋಟದಲ್ಲೇ ಒಂದು ಎಳನೀರು 30-35 ರೂ.ಗೆ ಕೀಳುತ್ತಿದ್ದಾರೆ. ಕಾಯಿಗಿಂತ ಮೊದಲೇ ಬರುವ ಒಂದು ಎಳನೀರಿಗೆ 35 ರೂ.ನಂತೆ 5 ಎಳನೀರಿನ ಬೆಲೆ 165 ರೂ. ಸಿಗುತ್ತದೆ. ಸಮಯ, ಶ್ರಮ ಉಳಿಯುವ ಜೊತೆಗೆ ತಜ್ಞರ ಪ್ರಕಾರ, ಮರದಲ್ಲಿ ಇಳುವರಿ ಹೆಚ್ಚುತ್ತದೆ. ಲೆಕ್ಕಾಚಾರ ಮಾಡಿ, ಚರ್ಚಿಸಿ, ಚಿಂತನೆ ಮಾಡಿ, ಇಲ್ಲಿ ಯಾರದು ತಪ್ಪಿದೆ ಅಂತಾ?
ತೆಂಗು ಕಲ್ಪವೃಕ್ಷ ಹೆಸರಿಗೆ ಮಾತ್ರ. ಬಹುಪಯೋಗಿ ತೆಂಗು ಲಾಭದಾಯಕವಲ್ಲವೆಂಬ ಆರೋಪ ಒಂದು ಕಡೆಯಾದರೆ, ಅದೊಂದು ಸೋಮಾರಿ ಬೆಳೆ ಎನ್ನುವ ಅಸಮಾಧಾನದ ಮಾತುಗಳು ರೈತರ ಬಾಯಿಂದ ಕೇಳಿದ್ದೇವೆ. ಏಕೆಂದರೆ ತೆಂಗು ಬೆಳೆದ ಬೆಳೆಗಾರ ಸದಾ ಸಮಸ್ಯೆಗಳೊಳಗೆ ಸುತ್ತುತ್ತಾ ಇರುತ್ತಾರೆ. ಅದರಲ್ಲೂ ಈ ಭಾಗದ ತೆಂಗು ಬೆಳೆಗಾರನಿಗೆ ಸಮಸ್ಯೆಗಳು ಹಾಸು ಹೊದ್ದು ಮಲಗಿದೆಯಂತೆ. ಕಳೆದ ಎರಡು ವರ್ಷಗಳ ಕಾಲ 8,100-11,000 ರೂ. ಒಳಗೆ ಇದ್ದ ಕೊಬ್ಬರಿ ಧಾರಣೆಯು 2024ರ ಸೆಪ್ಟೆಂಬರ್ನಲ್ಲಿ ಏರುತ್ತಾ ಈಗ 14,000-15,000 ನಡುವೆ ಗಿರಿಕಿ ಹೊಡೆಯುತ್ತಿದೆ. ವರ್ಷಕ್ಕೊಮ್ಮೆ ದುಡ್ಡು ನೋಡುವ ನಮ್ಮ ತೆಂಗು ಬೆಳೆಗಾರನಿಗೆ ನ್ಯಾಯವಾದ ಬೆಲೆ ಸಿಗದೇ ಇದ್ದರೆ ಮುಗಿತು ಸಾಲದ ಶೂಲಕ್ಕೆ ಸಿಲುಕಿದಂತೆಯೇ. ಇದರಿಂದ ಈಚೆಗೆ ತೆಂಗಿನ ಬೆಳೆಗಿಂತ ಅಡಿಕೆ ಬೆಳೆ ಕಡೆ ರೈತರು ಹೆಚ್ಚು ಒಲವು ತೋರುತ್ತಿರುವುದು ಕಂಡುಬರುತ್ತಿದೆ.
ಈಗ ತೆಂಗಿನಕಾಯಿಗೆ ದಾಖಲೆ ದರ. ಪ್ರತಿ ಕಿಲೋಗೆ 70 ರೂ. ಸಗಟು ದರ ಇದ್ದರೆ, ರಿಟೇಲ್ 100 ರೂ.ಗೂ ಹೆಚ್ವಿದೆ. ಮಾರುಕಟ್ಟೆಯಲ್ಲಿ ಇಂದು ತೆಂಗಿನ ಕಾಯಿ ಬೆಲೆ ಕೇಳಿದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ತೆಂಗಿನ ರುಚಿಗೆ ಪರ್ಯಾಯ ಇಲ್ಲ, ಅಡುಗೆಗೆ ಬೇಕೇ ಬೇಕು, ಪೂಜೆಗೂ ಬೇಕು. ಕಳೆದ ಎರಡ್ಮೂರು ತಿಂಗಳ ಹಿಂದೆ ಪ್ರತಿ ಕೆಜಿಗೆ 45-55 ರೂ. ಇದ್ದ ತೆಂಗಿನಕಾಯಿ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಏಪ್ರಿಲ್-ಮೇ ವೇಳೆಗೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಇಂದು ಅರಸೀಕೆರೆಯ ಮಾರುಕಟ್ಟೆಯಲ್ಲಿ ತೆಂಗಿನ ಬೆಲೆ ನಿಯಂತ್ರಣ ಕಳೆದುಕೊಂಡು ಏರುತ್ತಿರುವ ಹೊತ್ತಲ್ಲಿ ಬೇಡಿಕೆಯೂ ಹೆಚ್ಚಿದೆ. ತೆಂಗಿನಕಾಯಿಯ ಬೆಲೆ ದಾಖಲೆ ಬರೆದಿದೆ. ಇದರಿಂದ ತೆಂಗಿನಕಾಯಿ ದರ ಕೇಳುತ್ತಿದ್ದಂತೆಯೇ ಗ್ರಾಹಕರು ಹೌಹಾರುವಂತಾಗಿದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಉತ್ತಮ ಬೆಲೆ ಕಂಡಿದ್ದ ತೆಂಗಿನಕಾಯಿ ಇದೀಗ ಹೊಸ ವರ್ಷದ ಆರಂಭದಲ್ಲಿ ಮತ್ತಷ್ಟು ಏರಿಕೆಗತಿಯಲ್ಲೇ ಸಾಗುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಪ್ರತಿ ಕಿಲೋ 50 ರಿಂದ 52 ರೂ.ವರೆವಿಗೂ ತಲುಪಿದ್ದ ತೆಂಗಿನಕಾಯಿ ದರ, ಬಳಿಕ ತಿಂಗಳೊಳಗೆ 40 ರೂ.ಗೆ ಕುಸಿದಿತ್ತು. ಬಳಿಕ ಮತ್ತೆ ಚೇತರಿಸಿಕೊಂಡು ಏರಿಕೆ ಕಾಣುತ್ತಾ 70-80 ರೂ. ತಲುಪಿದೆ. ಇತ್ತೀಚಿನ ವರ್ಷಗಳಲ್ಲೇ ತೆಂಗಿನಕಾಯಿಗೆ ದೊರೆಯುತ್ತಿರುವ ಉತ್ತಮ ಧಾರಣೆ ಇದಾಗಿದೆ. ಸಾಧಾರಣ ಗಾತ್ರದ ಒಂದು ತೆಂಗಿನಕಾಯಿಗೆ ವ್ಯಾಪಾರಿಗಳು 40-50 ರೂ. ಬೆಲೆ ಹೇಳುತ್ತಿದ್ದಾರೆ. ತಿಂಗಳ ಹಿಂದೆ 15 ರೂ.ಗೆ ದೊರೆಯುತ್ತಿದ್ದ ಸಣ್ಣ ಗಾತ್ರದ ತೆಂಗಿನಕಾಯಿಗೆ ಈಗ 30-40 ರೂ.ಗಳಾಗಿದೆ. ಮಧ್ಯಮ ಗಾತ್ರದ ತೆಂಗಿನ ಕಾಯಿಗೆ 50 ರೂ. ಇದ್ದರೆ, ದಪ್ಪ ತೆಂಗಿಗೆ 60 ರೂ.ಗಳಾಗಿದೆ.