ವಾಷಿಂಗ್ಟನ್ ಡಿಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಸುಧೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ 2008ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ತನ್ವರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
26/11ರ ಉಗ್ರ ದಾಳಿಯ ಪ್ರಮುಖ ಆರೋಪಿ ಇದೀಗ ಅಮೆರಿಕದಲ್ಲಿ ಬಿಗಿ ಭದ್ರತೆಯ ಜೈಲಿನಲ್ಲಿದ್ದು, ಹಲವು ವರ್ಷಗಳಿಂದ ಈತನ ಗಡೀಪಾರಿಗೆ ಭಾರತ ಮನವಿ ಮಾಡಿಕೊಳ್ಳುತ್ತಾ ಬಂದಿತ್ತು. ಇದೀಗ ತನ್ವರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಟ್ರಂಪ್ ಮುಂದಾಗಿದ್ದಾರೆ. “26/11 ಮುಂಬೈ ಉಗ್ರದಾಳಿ ಪ್ರಕರಣದಲ್ಲಿ ಅರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ನಾವು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ‘ ಎಂದು ಟ್ರಂಪ್ ತಿಳಿಸಿದ್ದಾರೆ.
ಕಳೆದ ಜನವರಿ 21ರಂದು ಅಮೆರಿಕದ ಸುಪ್ರೀಂಕೋರ್ಟ್, ತನ್ವರ್ ರಾಣಾ ಮಾಡಿಕೊಂಡಿದ್ದ ಪರಾಮರ್ಶೆ ಅರ್ಜಿಯನ್ನು ತಿರಸ್ಕರಿಸಿ, ಭಾರತಕ್ಕೆ ಆತನನ್ನು ಗಡೀಪಾರು ಮಾಡಲು ಅವಕಾಶ ಮಾಡಿಕೊಟ್ಟಿತ್ತು. “ಸುಪ್ರೀಂಕೋರ್ಟ್ನ ಇತ್ತೀಚಿನ ನಿರ್ಧಾರದ ಹಿನ್ನೆಲೆಯಲ್ಲಿ ಮತ್ತು ಅಮೆರಿಕದಲ್ಲಿ ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ, ರಕ್ಷಣಾ ಇಲಾಖೆ ಈ ಪ್ರಕರಣದಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಮೌಲ್ಯಮಾಪನ ಮಾಡುತ್ತಿದೆ” ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಗಡೀಪಾರಿಗೆ ಸಂಬಂಧಿಸಿದಂತೆ ಅಮೆರಿಕದ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಗಡೀಪಾರನ್ನು ದೃಢಪಡಿಸಿದ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.