ನಟ ಡಾಲಿ ಧನಂಜಯ ಮದುವೆಗೆ ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ವಧು, ವರರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭಗೊಂಡಿದ್ದು ಅಭಿಮಾನಿಗಳು ಕೂಡ ನೆಚ್ಚಿನ ಜೋಡಿಯ ಮದುವೆ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈ ಮಧ್ಯೆ ಡಾಲಿ ಜೋಡಿಗೆ ಅಂಚೆ ಇಲಾಖೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಅಂಚೆ ಇಲಾಖೆ ನೀಡಿದ ವಿಶೇಷ ಉಡುಗೊರೆ ನೋಡಿ ದಿಲ್ ಖುಷ್ ಆದ ಡಾಲಿ ಧನಂಜಯ್ ಆ ಉಡುಗೊರೆಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡಾಕ್ಟರ್ ಧನ್ಯತಾ ಜೊತೆ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ಏನೆಂದರೆ, ಅವರ ಮದುವೆಯ ಆಮಂತ್ರಣ ಪತ್ರಿಕೆ ವಿನ್ಯಾಸಕ್ಕೆ ಭಾರತೀಯ ಅಂಚೆ ಇಲಾಖೆ ಕೂಡ ಫಿದಾ ಆಗಿದೆ. ಇನ್ಲ್ಯಾಂಡ್ ಲೆಟರ್ ಮಾದರಿಯಲ್ಲಿ ಸಿದ್ಧವಾದ ಆಹ್ವಾನ ಪತ್ರಿಕೆಗೆ ಅಂಚೆ ಇಲಾಖೆ ಕಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ ಅವರಿಗೆ ವಿಶೇಷವಾದ ಸ್ಟ್ಯಾಂಪ್ ಉಡುಗೊರೆ ನೀಡಿದ್ದಾರೆ. ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಲಾಗಿದೆ. ಧನಂಜಯ ಮತ್ತು ಧನ್ಯತಾ ಅವರ ಫೋಟೋ ಜೊತೆ ಶುಭ ವಿವಾಹ ಎಂಬ ಸಂದೇಶ ಇರುವ 12 ಸ್ಟ್ಯಾಂಪ್ಗಳನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ. ಅಂಚೆ ಇಲಾಖೆಯಿಂದ ಸಿಕ್ಕಿರುವ ಈ ಉಡುಗೊರೆಯನ್ನು ಕಂಡು ಧನಂಜಯ ಮತ್ತು ಧನ್ಯತಾ ಸಖತ್ ಖುಷಿಯಾಗಿದ್ದಾರೆ.
ಮೈಸೂರಿನ ಅಂಚೆ ಇಲಾಖೆ ಅಧಿಕಾರಿಗಳು ಧನಂಜಯ್ ಮನೆಗೆ ಭೇಟಿ ನೀಡಿ ಈ ಉಡುಗೊರೆಯನ್ನು ನೀಡಿದ್ದಾರೆ. ‘ಇನ್ಲ್ಯಾಂಡ್ ಲೆಟರ್ ಮಾದರಿಯಲ್ಲಿ ಆಮಂತ್ರಣ ನೀಡಿ ಜನರಿಗೆ ಮಾದರಿಯಾಗಿದ್ದೀರಿ. ನಿಮ್ಮ ನಡೆಯಿಂದ ಮತ್ತೆ ಇನ್ಲ್ಯಾಂಡ್ ಲೆಟರ್ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು’ ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ತಿಳಿಸಿದ್ದಾರೆ.