ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಹಿಟ್ ನಮ್ಮ ಪ್ರೀತಿಯ ರಾಮು ಚಿತ್ರ ರೀರಿಲೀಸ್ ಆಗುತ್ತಿದೆ. 2003ರಲ್ಲಿ ಬಿಡುಗಡೆಯಾಗಿದ್ದ ‘ನಮ್ಮ ಪ್ರೀತಿಯ ರಾಮು’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವ ಹೆಸರು ಮಾಡಿರಲಿಲ್ಲ. ಆದರೆ ದರ್ಶನ್ ನಟನೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದರು. ಇದೀಗ ಮತ್ತೆ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮರು ಬಿಡುಗಡೆಯಾಗುತ್ತಿರುವ ದರ್ಶನ್ ಅವರ ಪ್ರಥಮ ಚಿತ್ರ ಇದಾಗಿದೆ.
ಸಂಜಯ್-ವಿಜಯ್ ಜೋಡಿ ನಿರ್ದೇಶಿಸಿದ್ದ ಹಾಗೂ 1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ‘ವಸಂತಿಯುಮಂ ಲಕ್ಷ್ಮಿಯುಂ ಪಿನ್ನೆ ನಿಜಾನುಂ’ ರೀಮೇಕ್ ಆಗಿದ್ದ ‘ನಮ್ಮ ಪ್ರೀತಿಯ ರಾಮು’ ಚಿತ್ರವನ್ನು ಕನ್ನಡದಲ್ಲೂ ಅದೇ ಜೋಡಿ ನಿರ್ದೇಶಿಸಿತ್ತು. ದರ್ಶನ್ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅಭಿನಯ ತೋರಿದ ಚಿತ್ರ ಎಂಬ ಹಿರಿಮೆಗೆ ಈ ಚಿತ್ರ ಭಾಜನವಾದರೂ, ಗಲ್ಲಾಪೆಟ್ಟಿಯಲ್ಲಿ ಮಾತ್ರ ಮುಗ್ಗರಿಸಿತ್ತು.
ಇನ್ನೂ ದರ್ಶನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದುಕೊಂಡವರಿಗೆ ಬೇಸರವಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಮಾತ್ರವೇ ಭಾಕಿ ಇದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬರ್ತಡೇ ಆಚರಿಸಿಕೊಳ್ಳಲು ದರ್ಶನ್ ನಿರಾಕರಿಸಿದ್ದಾರೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ನಟ, ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನನಗೆ ವಿಪರೀತ ಕಾಲು ಮತ್ತು ಬೆನ್ನು ನೋವಿದೆ, ಗಂಟೆಗಟ್ಟಲೆ ನಿಂತುಕೊಂಡು ಇರಲು ಸಾಧ್ಯವಾಗುವುದಿಲ್ಲ. ಔಷಧ ತೆಗೆದುಕೊಳ್ಳುತ್ತಿದ್ದೇನೆ, ಅದರ ಪವರ್ ಇರುವವರೆಗೆ 10-15 ದಿನ ನೋವು ಕಡಿಮೆ ಇರುತ್ತದೆ, ಮತ್ತೆ ನೋವು ಆರಂಭವಾಗುತ್ತದೆ, ನನ್ನ ಅನಾರೋಗ್ಯ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅಷ್ಟೆ. ಯಾರೂ ಬೇಸರ ಮಾಡಿಕೊಳ್ಳಬಾರದು, ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದಿದ್ದಾರೆ.