ಬೆಂಗಳೂರು: ಫೆ. 11: ಬೆಂಗಳೂರಿನ ಹಿತದೃಷ್ಟಿಯನ್ನು ಕಾಯುವ ನಾಗರಿಕರಿಂದ ಸಲಹೆಗಳನ್ನು ಪಡೆದು, ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಿಜ್ವಾನ್ ಹರ್ಷದ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ, ಬೊಮ್ಮನಹಳ್ಳಿ ವಲಯಗಳು ಸೇರಿ ಆರ್.ವಿ ಡೆಂಟಲ್ ಕಾಲೇಜು ಹಾಗೂ ರಾಜರಾಜೇಶ್ವರಿ ನಗರ, ಪಶ್ಚಿಮ ವಲಯಗಳು ಸೇರಿ ಜ್ಞಾನಭಾರತಿ ಕ್ಯಾಂಪಸ್ ನ ಡಾ. ನರಸಿಂಹಯ್ಯ ಸಭಾಂಗಣದಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನಗರದಲ್ಲಿ ಸದ್ಯ ಇರುವ ಯಾವುದೇ ಕಾನೂನು, ಕಾಯ್ದೆಗಳಿಗೆ ಬೆಲೆ ಕೊಡುವವರಿಲ್ಲ. ಆದ್ದರಿಂದ ಉತ್ತ ಆಡಳಿತ ನಡೆಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಾರಿ ತರಲಾಗುತ್ತಿದೆ. ಜನರಿಗೆ ಯಾವ ಸೌಲಭ್ಯಗಳನ್ನು ನೀಡಬೇಕು, ಯಾವ ರೀತಿ ಆಡಳಿತವನ್ನು ನಡೆಸಬೇಕು ಎಂಬುದರ ಕುರಿತು ಹಲವಾರು ಆಯಾಮಗಳಲ್ಲಿ ಅಧ್ಯಯನ ನಡೆಸಿ ಅದನ್ನು ಜಾರಿಗೆ ತರಲು ಮುಂದಾಗಲಾಗುತ್ತಿದೆ ಎಂದು ಹೇಳಿದರು.
ನಾಗರಿಕರಿಗೆ ಸಿಗಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ನ್ಯಾಯಬದ್ದವಾಗಿ ಜನರಿಗೆ ಸರಿಯಾದ ಪದ್ದತಿಯಲ್ಲಿ ತಲುಪಿಸುವ ವ್ಯವಸ್ಥೆಯಲ್ಲಿ ಇಂದು ನಾವಿಲ್ಲ. ಅದಕ್ಕಾಗಿ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಮುಂದಾಗಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಹಿತದೃಷ್ಟಿಯನ್ನು ಕಾಯುವ ನಾಗರಿಕರಿಂದ ಸಲಹೆಗಳನ್ನು ಪಡೆದು, ಅತ್ಯಮೂಲ್ಯವಾದ ಅಂಶಗಳನ್ನು ವಿಧೇಯಕದಲ್ಲಿ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬೇರೆ ಬೇರೆ ರಾಜ್ಯ, ದೇಶಗಳ ಆಡಳಿತವನ್ನು ನಾವು ಅಧ್ಯಯನ ಮಾಡಿಯೇ ಈ ವಿಧೇಯಕವನ್ನು ತರಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ನಗರದ ಆಡಳಿತಕ್ಕೆ ಹೊಸ ಸ್ವರೂಪ ನೀಡಬೇಕು. ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರಾಗಿದ್ದು, ಈಗಾಗಲೇ 1.50 ಕೋಟಿ ಜನಸಂಖ್ಯೆ ವಾಸವಿದ್ದಾರೆ. ಇದರ ಜೊತೆಗೆ 1 ಕೋಟಿಗೂ ಹೆಚ್ಚು ವಾನಗಳಿವೆ. ಇದರಿಂದ ನಗರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಸೌಕರ್ಯಗಳನ್ನು ಕಲ್ಪಿಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಜಿಬಿಎ ವಿಧೇಯಕದಡಿ ನಗರ ಪಾಲಿಕೆಗಳನ್ನಾಗಿ ಮರು ವಿಂಗಡಣೆ ಮಾಡಿ ಅಲ್ಲಿಯೇ ಸಂಪೂರ್ಣ ಅಧಿಕಾರ ನೀಡಲು ಮುಂದಾಗಲಾಗುತ್ತಿದೆ ಎಂದರು.
ಜಿಬಿಎ ಕುರಿತು ಪ್ರಾತ್ಯಕ್ಷಿಕೆ:
ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ನೀಡಿದ ಪ್ರಾತ್ಯಕ್ಷಿಕೆಯಲ್ಲಿ, ಜಿಬಿಎ ಪ್ರದೇಶ, ಉದ್ದೇಶ, ರಚನೆ, ಆಡಳಿತಾತ್ಮಕ ಕಾರ್ಯಗಳು, ಯೋಜನಾ ಕಾರ್ಯಗಳು, ಜವಾಬ್ದಾರಿಗಳು, ಪ್ರಾಧಿಕಾರಿಗಳು, ಅನುದಾನ, ಜಿಬಿಎ ಸದಸ್ಯರು, ಕಾರ್ಯಕಾರಿ ಸಮಿತಿ, ನಗರ ಪಾಲಿಕೆಗಳು, ನಿಗಮನದ ಅಧಿಕಾರಿಗಳು, ನಗರ ಪಾಲಿಕೆಗಳ ಅವಧಿ, ಸ್ಥಾತಿ ಸಮತಿಗಳು, ಆಸ್ತಿ ನೋಂದಣಿ, ತೆರಿಗೆ, ಕಟ್ಟಡ ಯೋಜನೆಗಳು ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಮುಖ್ಯಾಂಶಗಳನ್ನು ವಿವರಿಸಿದರು.
ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿ:
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರು/ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಇ-ಮೇಲ್ ಆದ [email protected] ಮೂಲಕವೂ ಕಳುಹಿಸಬಹುದಾಗಿರುತ್ತದೆ.
100ಕ್ಕೂ ಹೆಚ್ಚು ಸಲಹೆಗಳ ಸ್ವೀಕಾರ:
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಎಲ್ಲಾ ಸಲಹೆಗಳನ್ನೂ ಕೂಲಂಕುಶವಾಗಿ ಪರಿಶೀಲನೆ ನಡೆಸಿ, ಕಾನೂನಿನಡಿ ಅವಕಾಶವಿರುವ ಎಲ್ಲಾ ಅಂಶಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.
ಸಾರ್ವಜನಿಕರಿಂದ ಬಂದಂತಹ ಪ್ರಮುಖ ಸಲಹೆಗಳು/ಅಭಿಪ್ರಾಯಗಳು:
1. ನಗರಕ್ಕೆ ಒಬ್ಬರನ್ನು ಮಾತ್ರ ಮೌಹಾಪೌರರನ್ನಾಗಿ ನಿಯೋಜಿಸಿ.
2. ಮಹಾಪೌರರಿಗೆ ಅವಧಿ ವಿಸ್ತರಣೆ ಮಾಡಿ.
3. ಲಾಟರಿ ವ್ಯವಸ್ಥೆ ಮೂಲಕ ವಾರ್ಡ್ ಸಮಿತೆಗೆ ಆಯ್ಕೆ ಮಾಡಿ.
4. ಬೆಂಗಳೂರು ನಗರವನ್ನು ಎಲ್ಲಿಯವರೆಗೆ ವಿಸ್ತರಣೆ ಮಾಡುತ್ತೀರಾ ಎಂಬುದರ ಬಗ್ಗೆ ಸ್ಪಷ್ಟಣೆ ನೀಡಿ.
5. ಬೆಸ್ಕಾಂ, ಜಲಮಂಡಳಿಯನ್ನು ಜಿಬಿಎಯಲ್ಲಿ ವಿಲೀನ ಮಾಡಿಕೊಳ್ಳಿ.
6. ಜಿಬಿಎದಲ್ಲಿ ಕೌನ್ಸಿಲರ್ ಗಳಿಗೆ ಹೆಚ್ಚು ಜವಾಬ್ದಾರಿಗಳನ್ನು ನೀಡಿ.
7. ನಾಗರಿಕರಿಗೆ ಕಾಯ್ದೆಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡಿ.
8. ಜಿಬಿಎ ಬರುತ್ತಿರುವುದು ಉತ್ತಮ ಸಂಗತಿಯಾಗಿದ್ದು, ಮತಗಟ್ಟೆ ಆಧಾರಿತ ಹಾಗೂ ಏರಿಯಾ ಆಧಾರಿತವಾಗಿಟ್ಟುಕೊಂಡು ವಿಂಗಡಣೆ ಮಾಡಿ.
9. ಗ್ರೇಟರ್ ಬೆಂಗಳೂರು ಬದಲು ಕನ್ನಡ ಪದವಾದ ಮಹಾನ್ ಬೆಂಗಳೂರು ಎಂದು ಬದಲಾಯಿಸಿ.
10. ವಿಭಜಿತವಾದ ಬಳಿಕ ಸಂಪರ್ಕ ಸರಿಯಾಗಿ ಸಿಗದೆ ಸಾಕಷ್ಟು ಸಮಸ್ಯೆಯಾಗಲಿದೆ.
11. ಗ್ರೇಟರ್ ಬೆಂಗಳೂರು ರಚನೆ ಮಾಡಿ, ಸೇರ್ಪಡೆಯಾಗುವ ಹಳ್ಳಿಗಳಿಗೆ ಕಂದಾಯ ಹೆಚ್ಚಳ ಮಾಡಿದರೆ ಸಮಸ್ಯೆಯಾಗಲಿದೆ.
12. ಪ್ರಸ್ತುತ ಇರುವ ವಿಸ್ತೀರ್ಣಕ್ಕೇ ಚುನಾವಣೆ ಮಾಡಿ, ಮುಂದಿನ ಚುನಾವಣೆಗೆ ಜಿಬಿಎ ರಚಿಸಿ ಅನುಷ್ಠಾನಕ್ಕೆ ತನ್ನಿ.
13. ನಗರ ಪಾಲಿಕೆಗಳನ್ನಾಗಿ ಮರು ವಿಂಗಡಿಸಿದರೆ ಎಲ್ಲಾ ಕಡೆಯೂ ಒಂದೇ ರೀತಿಯ ಅನುದಾನ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ.
14. ಪಾಲಿಕೆಯ ಹೆಸರುಗಳು ಮಾತ್ರ ಬದಲವಣೆಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಮಾತ್ರ
ಆಗುತ್ತಿಲ್ಲ.
15. ಪ್ರಾಯೋಗಿಕವಾಗಿ ಮಾಡಿ ನೋಡಿ, ಅದು ಯಶಸ್ವಿಯಾದರೆ ಜಿಬಿಎ ಅನ್ನು ಅನುಷ್ಠಾನಕ್ಕೆ ತನ್ನಿ.
ಬೆಳಗ್ಗೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಕೃಷ್ಣಪ್ಪ, ಶ್ರೀ ರವಿ ಸುಬ್ರಮಣ್ಯ, ಶ್ರೀ ಸಿ.ಕೆ ರಾಮಮೂರ್ತಿ, ಶ್ರೀ ಸತೀಶ್ ರೆಡ್ಡಿ, ಶ್ರೀ ಉದಯ್ ಬಿ. ಗರುಡಾಚಾರ್, ಜಂಟಿ ಸಮಿತಿಯ ಸದಸ್ಯರಾದ ಶ್ರೀ ಹೆಚ್.ಎಸ್ ಗೋಪಿನಾಥ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ ಶರವಣ, ಶ್ರೀ ಸುಧಾಮ್ ದಾಸ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ರಮ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಧ್ಯಾಹ್ನ ಕಾರ್ಯಕ್ರಮದಲ್ಲಿ ಜಂಟಿ ಸಮಿತಿಯ ಸದಸ್ಯರಾದ ಶ್ರೀ ಎಸ್.ಟಿ ಸೋಮಶೇಖರ್, ವಲಯ ಆಯುಕ್ತರಾದ ಸತೀಶ್, ಅರ್ಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.