ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಈ ತಂಡದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಆದರೀಗ ಟೂರ್ನಿಗೂ ಮುನ್ನ ಹಿಟ್ಮ್ಯಾನ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬಂದಿದೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್ನಲ್ಲಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾಯಕತ್ವ ತ್ಯಜಿಸಲು ಚಿಂತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಹಿಟ್ಮ್ಯಾನ್ ಲಯಕ್ಕೆ ಮರಳಲು ಯಶಸ್ವಿಯಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇದರ ಹೊರತಾಗಿ ಮತ್ತೆ ವೈಫಲ್ಯ ಅನುಭವಿಸಿದರೆ, ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಲಿದ್ದಾರೆ. ಇದಾಗ್ಯೂ ಅವರು ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು. ಅಲ್ಲೂ ಕೂಡ ವಿಫಲರಾದರೆ ಆಡುವ ಬಳಗದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.