ನವದೆಹಲಿ:- ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ದೆಹಲಿಯಲ್ಲಿ ಸುದೀರ್ಘ ಅವಧಿಯ ಬಳಿಕ ಅಧಿಕಾರ ಹಿಡಿದಿದೆ. ಸತತ 3ನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ದೆಹಲಿ ಗದ್ದುಗೆಯನ್ನ ಹಿಡಿದುಕೊಂಡಿದೆ.
ಬಜೆಟ್ನಲ್ಲಿ ಮಧ್ಯಮ ವರ್ಗದವರನ್ನು ಕೇಂದ್ರಿಕರಿಸಿದ್ದು, ಸ್ಪಷ್ಟವಾದ ಬೆಂಬಲ ಬಿಜೆಪಿಗೆ ಸಿಕ್ಕಿದ್ದು, ಎಎಪಿಗೆ ಭಾರೀ ಹೊಡೆತ ನೀಡಿದೆ.
ಎಎಪಿಯ ಎಲ್ಲಾ ಹಿರಿಯ ನಾಯಕರು ಜೈಲಿಗೆ ಹೋಗಿ ಬಂದಿದ್ದು ಆಡಳಿತ ವಿರೋಧಿ ಅಲೆ ಮತ್ತು ಆಂತರಿಕ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರದ ಚುಕ್ಕಾಣೆ ನೀಡಲು ಮುಂದಾದ ಮತದಾರರ ಮನಸ್ಸಿನ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.
ಎಎಪಿ ರಾಜಕೀಯ ಸ್ಥಿತಿಯ ಬಗ್ಗೆ ಮಧ್ಯಮ ವರ್ಗದವರಿಗೆ ಹತಾಶೆ ಉಂಟಾದಂತೆ ತೋರುತ್ತದೆ. 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಕಲ್ಯಾಣ ಯೋಜನೆಗಳು ಬಡವರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷವಾಗಿದೆ ಎಂಬ ಅಸಮಾಧಾನ ಮಧ್ಯಮ ವರ್ಗದ ಜನರಲ್ಲಿ ಬಂದಂತಿದೆ
ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ತಮ್ಮ ಭಾಷಣಗಳಲ್ಲಿ ಮಧ್ಯಮ ವರ್ಗದ ಜನರಿಗೆ ಯೋಜನೆಗಳನ್ನು ಘೋಷಿಸಿದರು. ಆದರೆ ಅದು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಬಿಜೆಪಿ ಆರ್ಡಬ್ಲ್ಯೂಎ ಸಭೆಗಳು ಸೇರಿದಂತೆ ಹಲವಾರು ಸಂಪರ್ಕ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಆಕರ್ಷಿಸಿತು. ಅಲ್ಲದೇ ಕೇಂದ್ರ ಬಜೆಟ್ನಲ್ಲಿ ಸರ್ಕಾರ ತೆರಿಗೆ ಕಡಿತದ ಘೋಷಣೆ ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಧ್ಯಮ ವರ್ಗದ ಜನಸಂಖ್ಯೆ ದೆಹಲಿಯ ಜನಸಂಖ್ಯೆಯ 67.16% ರಷ್ಟಿದೆ. ಬಿಜೆಪಿ ಈ ಮತಗಳನ್ನು ಸೆಳೆಯಲು ಯಶಸ್ವಿಯಾಗಿದೆ.
ಬಿಜೆಪಿ ಈ ಹಿಂದೆ ಕಲ್ಯಾಣ ಯೋಜನೆಗಳನ್ನು ಉಚಿತ ಎಂದು ಅಪಹಾಸ್ಯ ಮಾಡಿದ್ದರೂ ಸಹ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಘೋಷಿಸಿತ್ತು. ಪ್ರಧಾನಿ ಮೋದಿಯವರೇ ಈ ಘೋಷಣೆ ಮಾಡಿದ್ದರು. ಇದು ಬಿಜೆಪಿಗೆ ಮತ ಚಲಾಯಿಸಿದರೆ ಬಡವರು ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಎಎಪಿಯ ಹೇಳಿಕೆಗೆ ಯಾವುದೇ ಮಹತ್ವ ಕೊಡದಂತೆ ಮಾಡಿತು.
ಎಎಪಿಯ ಜನಪ್ರಿಯತೆ ಕಡಿಮೆಯಾಗಲು ದೊಡ್ಡ ಕಾರಣವೆಂದರೆ ರಾಜಧಾನಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ. ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ರಾಷ್ಟ್ರ ರಾಜಧಾನಿಯಾದ್ಯಂತ ಮತದಾರರನ್ನು ಕೆರಳಿಸಿತ್ತು.
ಕಳಪೆ ರಸ್ತೆಗಾಗಿ ಎಲ್ಜಿ ಯೋಜನೆಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ಎಎಪಿ ಆರೋಪಿಸುತ್ತಿತ್ತು. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ದೆಹಲಿ ಸರ್ಕಾರ ಮತ್ತು ಗಮನಾರ್ಹ ಅಧಿಕಾರ ಹೊಂದಿರುವ ಎಲ್ಜಿ ನಡುವಿನ ಹೆಚ್ಚಿದ ದ್ವೇಷದಿಂದ ಜನ ರೋಸಿಹೋಗಿದ್ದರು.