ಶಿಡ್ಲಘಟ್ಟ: ತಮ್ಮ ಆಡಳಿತಾವಧಿಯ ಐದು ವರ್ಷಗಳಲ್ಲಿ ನಕಲಿ ವೈದ್ಯರ ವಿರುದ್ದ ಒಂದೂ ಪ್ರಕರಣ ದಾಖಲಿಸದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತ ಎಸ್ ಪಿ ಗುಡುಗಿದ್ಧಾರೆ. ವೈದ್ಯಾಧಿಕಾರಿಯಾಗಿದ್ದ ಡಾ. ವೆಂಕಟೇಶ್ ಮೂರ್ತಿಗೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆಂಟೋನಿ ಜಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತಾಲ್ಲೂಕು ಆಡಳಿತ ಕಚೇರಿಯಲ್ಲಿ ಏರ್ಪಾಡಾಗಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸಿದರು. ಈ ವೇಳೆ ಸಾಮಾಜಿಕ ಹೋರಾಟಗಾರ ಮಕ್ಸುದ್ ಸಾರ್ವಜನಿಕರ ಪರವಾಗಿ ದೂರು ಕೊಟ್ಟ ಹಿನ್ನೆಲೆ ಲೋಕಾಯುಕ್ತ ಅಧೀಕ್ಷಕರು, ವೈದ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ನಕಲಿ ವೈದ್ಯರಿಗೆ ವಾರ್ನಿಂಗ್ ಕೊಟ್ಟಿದ್ದೇನೆ ಎಂದು ಹಾರಿಕೆಯ ಉತ್ತರ ನೀಡಿದ ವೈದ್ಯಾಧಿಕಾರಿ ವೆಂಕಟೇಶ್ ಮೂರ್ತಿಯನ್ನು ಉದ್ದೇಶಿಸಿ, ವಾರ್ನಿಂಗ್ ಕೊಡಲು ಯು ಆರ್ ನಾಟ್ ಎ ರೌಡಿ,, ಅಥವಾ ನೀವೇನಾದರು ಸೇನಾಧಿಪತಿಯೇ..? ಎಂದು ಪ್ರಶ್ನಿಸಿದರು. ಸಾರ್ವಜನಿಕರಿಂದ ದೂರುಗಳಿದ್ದಾಗಲೂ, ಕೂಡಾ ತಮ್ಮ ಐದು ವರ್ಷಗಳ ಆಡಳಿತಾವಧಿಯಲ್ಲಿ ನಕಲಿ ವೈದ್ಯರ ವಿರುದ್ಧ ಒಂದೂ ಪ್ರಕರಣ ದಾಖಲಿಸದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕರಿಂದ ದೂರುಗಳು ಬಂದಾಗ ತಾಲ್ಲೂಕು ವೈದ್ಯಾಧಿಕಾರಿಯಾಗಿ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸುವುದು ನಿಮ್ಮ ಕರ್ತವ್ಯ. ಕೇವಲ ವಾರ್ನಿಂಗ್ ಕೊಟ್ಟು ಸುಮ್ಮನಾಗಲು ಕಾರಣವೇನು ಎಂದು ಕೇಳಿದರು. ವೈದ್ಯಾಧಿಕಾರಿಯಾಗಿ ನಿಮ್ಮ ನಿರ್ಲಕ್ಷ್ಯ ತರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಡಾ. ವೆಂಕಟೇಶ್ ಮೂರ್ತಿ ಶಿಡ್ಲಘಟ್ಟ ತಾಲ್ಲೂಕು ವೈದ್ಯಾಧಿಕಾರಿ ಆಗಿ ನೇಮಕಗೊಂಡಾಗಿನಿಂದಲೂ, ಸಾರ್ವಜನಿಕರೂ ಮತ್ತು ರೋಗಿಗಳಿಂದ ಒಂದಿಲ್ಲೊಂದು ದೂರುಗಳು ಕೇಳಿ ಬರುತ್ತಲೇ ಇವೆ.