ಇಂಡೊನೇಶ್ಯಾದ ಉತ್ತರ ಸುಮಾತ್ರ ಪ್ರಾಂತದಲ್ಲಿ ಕಳೆದೊಂದು ವಾರದಿಂದ ಧಾರಕಾರ ಮಳೆ ಸುರಿಯುತ್ತಿದೆ. ಪರಿಣಾಮ ನಾಲ್ಕು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತ ಪ್ರದೇಶದ ರಸ್ತೆಯಲ್ಲಿ ಮಿನಿ ಬಸ್ಸಿನ ಸಹಿತ ಹಲವು ವಾಹನಗಳು ಭೂಕುಸಿತದಡಿ ಸಿಲುಕಿಕೊಂಡಿವೆ. ವಾಹನದಲ್ಲಿದ್ದವರ ರಕ್ಷಣಾ ಕಾರ್ಯಾಚರಣೆಗೆ ಪ್ರವಾಹ ಮತ್ತು ಭಾರೀ ಮಳೆ ಅಡ್ಡಿಯಾಗಿದೆ ಎಂದು ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ.
ಡೆಲಿ ಸೆರ್ಡಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ. ಇತರ ಎರಡು ಜಿಲ್ಲೆಗಳಲ್ಲಿ ಶೋಧ ಕಾರ್ಯದ ಸಂದರ್ಭ 20 ಮೃತದೇಹ ಪತ್ತೆಯಾಗಿದೆ. ಇದೀಗ ರಕ್ಷಣಾ ಕಾರ್ಯಕರ್ತರು ನಾಪತ್ತೆಯಾಗಿರುವವರ ಇಬ್ಬರ ಪತ್ತೆ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಉತ್ತರ ಸುಮಾತ್ರ ಪೊಲೀಸ್ ವಕ್ತಾರ ಹದಿ ವಹ್ಯುಡಿ ತಿಳಿಸಿದ್ದಾರೆ.
ಹಲವು ಮನೆಗಳು, ಮಸೀದಿಗಳು ಹಾಗೂ ಭತ್ತದ ಗದ್ದೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ. ಪ್ರಾಂತೀಯ ರಾಜಧಾನಿ ಮೆದಾನ್ನಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನಕ್ಕೆ ಅಡ್ಡಿಯಾಗಿದೆ. ಸದ್ಯ ಭೂಕುಸಿತರದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ.