ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೂಲ್’ ಸಿನಿಮಾದಲ್ಲಿ ನಟಿಸಿದ್ದ ಸನಾ ಖಾನ್ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಮುಸ್ಲಿಂ ಧರ್ಮಗುರು ಅನಾಸ್ ಸಯ್ಯದ್ ಅವರನ್ನು ಮದುವೆ ಆಗಿರುವ ಸನಾ ಖಾನ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಸನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
‘ಅಲ್ಲಾಹನ ಆಶೀರ್ವಾದದಿಂದ ನಾವು ಮೂವರು ಈಗ ನಾಲ್ವರಾಗುತ್ತಿದ್ದೇವೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕನಾಗಿದ್ದಾನೆ. ಮಗುವಿಗಾಗಿ ನಾವು ಕಾಯುತ್ತಿದ್ದೇವೆ. ಅಲ್ಲಾಹ ನಿಮ್ಮ ಆಶೀರ್ವಾದ ಇರಲಿ’ ಎಂದು ಅವರು ಬರೆದುಕೊಂಡಿದ್ದಾರೆ.
‘ಇಂಥ ಉಡುಗೊರೆಯನ್ನು ನೀಡಲು ಅಲ್ಲಾಹನಿಗೆ ಮಾತ್ರ ಅಧಿಕಾರವಿದೆ. ನಮಗೆ ಒಳ್ಳೆಯದು ಮಾಡಲಿ. ಅಲ್ಲಾಹ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ’ ಎಂದು ನಟಿ ಬರೆದುಕೊಂಡಿದ್ದಾರೆ.
ಕೇರಳ ಮೂಲದ ಸನಾ ಖಾನ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅವರು 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಗಣೇಶ್ ಗೆ ಜೋಡಿಯಾಗುವ ಮೂಲಕ ‘ಕೂಲ್’ ಸಿನಿಮಾದಲ್ಲಿ ನಟಿಸಿದ್ದರು. ಹಿಂದಿ, ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ತಮಿಳಿನ ‘ಅಯೋಗ್ಯ’ ಅವರ ನಟನೆಯ ಕೊನೆಯ ಚಿತ್ರ.