ದೇಶದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದ ಸಾನಿಯಾ ಮಿರ್ಜಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1986ರಲ್ಲಿ ಇದೇ ದಿನದಂದು ಮುಂಬೈನಲ್ಲಿ ಜನಿಸಿದ್ದ ಸಾನಿಯಾ ಮಿರ್ಜಾ ವಿಶ್ವ ಟೆನಿಸ್ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದ ಹಲವು ಬಾರಿ ಮಹಿಳೆಯ ಡಬಲ್ಸ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು. ತಮ್ಮ ಟೆನಿಸ್ ವೃತ್ತಿ ಜೀವನದಲ್ಲಿ ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಅವರು ಗೆದ್ದಿದ್ದಾರೆ.
2003ರಲ್ಲಿ ಟೆನಿಸ್ ವೃತ್ತಿ ಜೀವನ ಆರಂಭಿಸಿದ್ದ ಸಾನಿಯಾ ಮಿರ್ಜಾ 2013ರಲ್ಲಿ ಮಹಿಳೆಯ ಸಿಂಗಲ್ಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರು. ಸಿಂಗಲ್ಸ್ ವಿಭಾಗದಲ್ಲಿಯೂ ಹೈದರಾಬಾದ್ ಮೂಲದ ಆಟಗಾರ್ತಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಗಳಲ್ಲಿ ಮಾತ್ರ ಅವರು ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ರೈತರೇ ಗಮನಿಸಿ.. ಕಡಿಮೆ ಬಂಡವಾಳ, ಅಧಿಕ ಲಾಭ! ಈ ಬೆಳೆಯಿಂದ ಲಕ್ಷಗಟ್ಟಲೆ ಲಾಭ ಪಡೆಯಬಹುದು!
2016ರ ಆಸ್ಟ್ರೇಲಿಯಾ ಓಪನ್, 2015ರಲ್ಲಿ ಯುಎಸ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ಷಿಪ್ನಲ್ಲಿ ಮೂರು ಬಾರಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ನಂತರ, ಮಿಶ್ರ ಡಬಲ್ಸ್ ವಿಭಾಗದಲ್ಲಿಯೂ ಅವರು 2009ರ ಆಸ್ಟ್ರೇಲಿಯಾ ಓಪನ್, 2012ರ ಫ್ರೆಂಚ್ ಓಪನ್ ಹಾಗೂ 2014ರ ಯುಎಸ್ ಓಪನ್ನಲ್ಲಿ ಸಾನಿಯಾ ಚಾಂಪಿಯನ್ ಆಗಿದ್ದರು. ಸಾನಿಯಾ ಮಿರ್ಜಾ ಅವರ ಟೆನಿಸ್ ಕ್ರೀಡೆಯಲ್ಲಿನ ಸಾಧನೆಯನ್ನು ಪರಿಗಣಿಸಿದ ಭಾರತ ಸರ್ಕಾರ 2004ರಲ್ಲಿ ಅರ್ಜುನ ಪ್ರಶಸ್ತಿ, 2006ರಲ್ಲಿ ಪದ್ಮ ಶ್ರೀ, 2015ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಹಾಗೂ 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಸಾನಿಯಾ.ಡಬಲ್ಸ್ನಲ್ಲಿ ವಿಶ್ವದ ಮೊದಲ ಶ್ರೇಯಾಂಕ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2005 ರಲ್ಲಿ WTA ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾನಿಯಾ ಅನೇಕ ಗೌರವಗಳನ್ನು ಪಡೆದಿದ್ದಾರೆ.
ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ಅವರ ಮದುವೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 2010 ರಲ್ಲಿ ವಿವಾಹವಾದರು. ನಂತರ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್ ಅವರಿಗೆ ಸಾನಿಯಾ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು.