ಚಿತ್ರನಟ ವಿಜಯ್ ದಳಪತಿ ಅವರ ರಾಜಕೀಯ ಪ್ರವೇಶದ ಬಗ್ಗೆ ತಮಿಳುನಾಡು ಈಗಾಗಲೇ ಬಿಸಿ ವಿಷಯವಾಗಿದೆ. ತಮಿಳುನಾಡಿನಲ್ಲಿ ಅಕ್ಟೋಬರ್ 27 ರಂದು ಆಯೋಜಿಸಿದ್ದ ಸಮಾವೇಶಕ್ಕೆ ಅಪಾರ ಜನಸ್ತೋಮ ಸೇರಿತ್ತು. ತಮಿಳಗ ವೆಟ್ರಿ ಕಳಗಂ ಹೆಸರಿನಲ್ಲಿ ಹುಟ್ಟು ಹಾಕಿರುವ ಪಕ್ಷದ ಸಾರ್ವಜನಿಕ ಸಭೆಯ ಯಶಸ್ಸು ಮುಂದಿನ ದಿನಗಳಲ್ಲಿ ತಮಿಳುನಾಡಿನ ಜನತೆ ಹೇಗೆ ಬೆಂಬಲಿಸುತ್ತಾರೆ ಎಂಬುದಕ್ಕೆ ನಿದರ್ಶನ. 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಸಕ್ಸಸ್ಪುಲ್ ಆಗಿ ಇದು ನೆರವೇರಿತ್ತು.
ಇನ್ನೂ ರಾಜಕಾರಣಿ ವಿಜಯ್ ದಳಪತಿ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟಿವಿಕೆ ನಿರ್ಣಯದಲ್ಲಿ ಉಲ್ಲೇಖಿಸಿದೆ.
ಪಕ್ಷವು ನೀಟ್ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕೆಂದು ಒತ್ತಾಯಿಸಿದೆ. ರಾಜ್ಯ ಸ್ವಾಯತ್ತ ನೀತಿಯ ನಮ್ಮ ಬೇಡಿಕೆಯ ಪ್ರಕಾರ, ಶಿಕ್ಷಣವು ರಾಜ್ಯ ಪಟ್ಟಿಗೆ ಸೇರಿದೆ. ಕೇಂದ್ರ ಸರ್ಕಾರವು ಶಿಕ್ಷಣವನ್ನು ರಾಜ್ಯ ಪಟ್ಟಿಗೆ ವರ್ಗಾಯಿಸಿದರೆ, ರಾಜ್ಯ ಸರ್ಕಾರವು ತಾನೇ NEET ಅನ್ನು ರದ್ದುಗೊಳಿಸಬಹುದು. ನಮ್ಮ ಪಕ್ಷದ ಕಾರ್ಯಕಾರಿ ಸಮಿತಿಯು, ಇದಕ್ಕೆ ಕೇಂದ್ರ ಸರ್ಕಾರದ ಅಡಚಣೆಯನ್ನು ವಿರೋಧಿಸುತ್ತದೆ. ತಮಿಳುನಾಡು ಜನರನ್ನು ನಕಲಿ ಭರವಸೆಗಳೊಂದಿಗೆ ವಂಚಿಸುತ್ತಿರುವ ರಾಜ್ಯ ಡಿಎಂಕೆ ಸರ್ಕಾರವನ್ನೂ ವಿರೋಧಿಸುತ್ತದೆ ಎಂದು ಟೀಕಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ, ಮದ್ಯ ಮಾರಾಟ ಮತ್ತು ಔಷಧಗಳ ವಿಚಾರವಾಗಿ ಆಡಳಿತಾರೂಢ ಡಿಎಂಕೆಯನ್ನು ಟಿವಿಕೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಒತ್ತಾಯಿಸಿದೆ. ವಿಜಯ್ ದಳಪತಿ ಪಕ್ಷವು ಸಾಮಾಜಿಕ ನ್ಯಾಯಕ್ಕಾಗಿ ಡಿಎಂಕೆಯ ಘೋಷಣೆಯನ್ನು ಲೇವಡಿ ಮಾಡಿದೆ. ಆಡಳಿತ ಪಕ್ಷವು ಜಾತಿ ಗಣತಿಗೆ ಒತ್ತಾಯಿಸುವ ಬದಲು ಜಾತಿ ಸಮೀಕ್ಷೆಯನ್ನು ನಡೆಸಬೇಕು ಎಂದು ಹೇಳಿದೆ.