ʼಚಿಯಾ’ ಎಂಬ ಪದವು ಸ್ಪ್ಯಾನಿಷ್ ಪದ ʼಚಿಯಾನ್’ನಿಂದ ಬಂದಿದೆ, ಇದರರ್ಥ ಎಣ್ಣೆಯುಕ್ತ. ತೈಲದ ಅಂಶವು ಇದರಲ್ಲಿ ಜಾಸ್ತಿ. ಚಿಯಾ ಬೀಜಗಳನ್ನು ಕನ್ನಡದಲ್ಲಿ ಕಾಮಕಸ್ತೂರಿ ಎನ್ನುತ್ತೇವೆ. ಸೂಪರ್ ಫುಡ್ಗಳಲ್ಲಿ ಒಂದಾದ ಈ ಚಿಯಾ ಬೀಜಗಳ ಮೂಲ ಮೆಕ್ಸಿಕೋ. ಮೂಲದ ವೈಜ್ಞಾನಿಕ ಹೆಸರು ಸಾಲ್ವಿಯಾ ಹಿಸ್ಪಾನಿಕಾ.
ಆಧುನಿಕ ಯುಗದಲ್ಲಿ ಅನಾರೋಗ್ಯಕರ ಆಹಾರ ಹಾಗೂ ವ್ಯಾಯಾಮವಿಲ್ಲದೆ ಇರುವ ಜೀವನದಿಂದಾಗಿ ಹಲವಾರು ರೀತಿಯ ದೈಹಿಕ ಅನಾರೋಗ್ಯಗಳು ಕಾಡುವುದು ಇದೆ. ಅದರಲ್ಲೂ ಮುಖ್ಯವಾಗಿ ಬೊಜ್ಜಿನ ಸಮಸ್ಯೆಯು ಪ್ರತಿಯೊಬ್ಬರನ್ನು ಕಾಡುತ್ತಲೇ ಇರುವುದು. ಇದನ್ನು ನಿವಾರಣೆ ಮಾಡಲು ಕೆಲವರು ಎಲ್ಲಾ ರೀತಿಯಿಂದಲೂ ತುಂಬಾ ಶ್ರಮ ವಹಿಸುವರು.
ಆದರೆ ಕೆಲವೇ ದಿನ ಇದರಿಂದ ಬೇಸತ್ತು ಮತ್ತೆ ಹಳೆಯ ಆಹಾರ ಕ್ರಮ ಹಾಗೂ ಜೀವನಶೈಲಿಗೆ ಮರಳುವರು. ಹೀಗಾಗಿ ದೇಹದ ಬೊಜ್ಜು ಹಾಗೆ ಉಳಿಯುವುದು. ಕೆಲವೊಂದು ಆಹಾರಗಳಿಂದಲೂ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಬಹುದು. ಅಂತಹ ಒಂದು ಆಹಾರವೆಂದರೆ ಅದು ಚಿಯಾ ಬೀಜ.
ಚಿಯಾ ಬೀಜಗಳು ವೇಗವಾಗಿ ತೂಕವನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ
ಚಿಯಾ ಬೀಜಗಳು ಕಾರ್ಬೋಹೈಡ್ರೇಟ್-ಭರಿತ ಧಾನ್ಯಗಳಾಗಿದ್ದು, ಒಮ್ಮೆ ನೀರಿನಲ್ಲಿ ಅಥವಾ ಇತರ ಯಾವುದೇ ದ್ರವದಲ್ಲಿ ನೆನೆಸಿದರೆ ಮೂಲ ಗಾತ್ರಕ್ಕೂ ಹತ್ತಾರು ಪಟ್ಟು ಹಿಗ್ಗುತ್ತದೆ. ಚಿಯಾ ಬೀಜಗಳ ಒಂದು ಉತ್ತಮ ಪ್ರಯೋಜನವೆಂದರೆ ಅದರಲ್ಲಿ ಸಾಕಷ್ಟು ಕರಗದ ನಾರಿನ ಅಂಶವಿದೆ, ಇದು ದೇಹದ ಕಾರ್ಯಚಟುವಟಿಕೆಗೆ ಮತ್ತು ಕೊಬ್ಬನ್ನು ನಿಯಂತ್ರಿಸಲು ಅವಶ್ಯಕವಾಗಿದೆ.
ಎರಡು ಚಮಚ ಚಿಯಾ ಬೀಜಗಳಲ್ಲಿ ಕನಿಷ್ಠ 10 ಗ್ರಾಂ ಕರಗದ ನಾರಿನಂಶ ಇರುತ್ತದೆ ಎಂದು ಹೇಳಲಾಗುತ್ತದೆ. ಅದೇ ಕಾರಣದಿಂದ, ಇದು ತೂಕ ಇಳಿಸಲು ಅಪಾರ ನೆರವನ್ನು ನೀಡುತ್ತದೆ. ಅಲ್ಲೇ ಇದೊಂದು ಸಸ್ಯಾಧಾರಿತ ಅತ್ಯುತ್ತಮ ಪ್ರೋಟೀನ್ ಮೂಲವೂ ಆಗಿದೆ. ಚಿಯಾ ಬೀಜಗಳ ಸೇವನೆಯಿಂದ ಹಸಿವು ನೀಗುವುದು ಮತ್ತು ಸೇವಿಸಿದ ಬಳಿಕ ಹೆಚ್ಚಿನ ಸಮಯದ ವರೆಗೆ ಹೊಟ್ಟೆ ತುಂಬಿರುವ ಭಾವನೆಗಳನ್ನು ಹೆಚ್ಚಿಸುತ್ತದೆ ಎಂದು ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನವು ಕಂಡುಹಿಡಿದಿದೆ.
ಉತ್ತಮ ಪ್ರಮಾಣದ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳುಸುತ್ತವೆ ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತವೆ ಹಾಗೂ ಈ ಕೆಲಸಕ್ಕಾಗಿ ದೇಹ ಸಂಗ್ರಹಿಸಲ್ಪಟ್ಟ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ತೂಕ ಇಳಿಕೆಯ ನಿಜವಾದ ಮೂಲ ಇದೇ! ಅಷ್ಟೇ ಅಲ್ಲ, ಹೊಟ್ಟೆಯನ್ನು ಹೆಚ್ಚಿನ ಹೊತ್ತಿನವರೆಗೆ ತುಂಬಿರುವ ಭಾವನೆ ಮೂಡಿಸುವ ಮೂಲಕ ಅನಗತ್ಯ ಆಹಾರಗಳನ್ನು ಸೇವಿಸದಂತೆ ತಡೆಯುತ್ತದೆ.
ನೀವು ನಿಯಮಿತವಾಗಿ ಚಿಯಾ ಬೀಜಗಳನ್ನು ಸೇವಿಸುತ್ತಾ ಹೋದರೆ ಏನಾಗುತ್ತದೆ?
ಈ ಪುಟ್ಟ ಬೀಜಗಳು ಆಂಟಿಆಕ್ಸಿಡೆಂಟ್ ಮತ್ತು ಒಮೆಗಾ -3 ಅಂಶಗಳಿಂದ ಸಮೃದ್ಧವಾಗಿವೆ. ಇದು ಹೃದಯವನ್ನು ಆರೋಗ್ಯವಾಗಿಡಲು, ಅನಾರೋಗ್ಯಕರ ಕೊಬ್ಬು ಮತ್ತು ದೇಹದಲ್ಲಿನ ಫ್ರೀ ರ್ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಈ ಎಲ್ಲಾ ಅಂಶಗಳು ಹೆಚ್ಚುವರಿ ತೂಕವನ್ನು ನಿಯಂತ್ರಣದಲ್ಲಿಡಲು ಉತ್ತಮ ಮಾರ್ಗವಾಗಿದೆ.
ಕರುಳಿನಲ್ಲಿ ವಿಷವನ್ನು ನಿರ್ಮಿಸಲು ಮತ್ತು ಹೊಟ್ಟೆ ಮತ್ತು ಸೊಂಟದ ಸುತ್ತಲೂ ಸಂಗ್ರಹವಾಗುವ ಒಳಾಂಗಗಳ ಅಡಿಪೋಸ್ ಅಂಗಾಂಶಗಳನ್ನು ಕಾಪಾಡಿಕೊಳ್ಳಲು ಚಿಯಾ ಬೀಜಗಳು ಅತ್ಯಂತ ಪ್ರಯೋಜನಕಾರಿ ಎಂದು ಕೆಲವು ಸಂಶೋಧನೆಗಳಿಂದ ಸಾಬೀತು ಪಡಿಸಲಾಗಿದೆ. ಅಲ್ಲದೇ ಚಿಯಾ ಬೀಜಗಳ ಸೇವನೆಯಿಂದ ಮಧುಮೇಹಿಗಳು ತಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಹಾಗೂ ರಕ್ತದ ಒತ್ತಡ ಮಟ್ಟಗಳನ್ನು ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ ಎಂದೂ ಹೇಳಲಾಗುತ್ತದೆ.
ಆದರೆ ಅತಿಯಾದರೆ ಅಮೃತವೂ ವಿಷ
ಇಷ್ಟೆಲ್ಲಾ ಶಕ್ತಿಗಳಿಂದ ತುಂಬಿರುವ ಮತ್ತು ಆರೋಗ್ಯಕರ ಪೋಷಕಾಂಶಗಳಿಂದಾಗಿ ಚಿಯಾ ಬೀಜಗಳನ್ನು ಸೂಪರ್ ಫುಡ್ ಎಂಬ ಅನ್ವರ್ಥಕನಾಮವೇನೂ ಅತಿಶಯೋಕ್ತಿಯಲ್ಲ. ಇದರಲ್ಲಿರುವ ಕ್ಯಾಲೋರಿ ಮತ್ತು ಕೊಬ್ಬಿನಂಶ (ಎರಡು ಚಮಚವು 138 ಕ್ಯಾಲೊರಿಗಳನ್ನು ಹೊಂದಿರುತ್ತದೆ)ಗಳೂ ಮಿತವಾಗಿಯೇ ಇದ್ದು ಎಲ್ಲರಿಗೂ ಸೂಕ್ತವಾಗುವಂತಿದೆ. ಆದರೆ ಈ ಬೀಜಗಳ ಸೇವನೆಯನ್ನು ಅತಿಯಾಗಿ ಸೇವಿಸುವುದರಿಂದ ತೂಕ ನಷ್ಟವು ವ್ಯತಿರಿಕ್ತ ಪರಿಣಾಮ ಪಡೆಯಬಹುದು. ಅಂದರೆ ತೂಕ ಇಳಿಯುವ ಬದಲು ಏರತೊಡಗಬಹುದು. ಹಾಗಾಗಿ, ಚಿಯಾ ಬೀಜಗಳನ್ನು ತೂಕ ಇಳಿಸುವ ನಿಟ್ಟಿನಲ್ಲಿ ಆಹಾರಕ್ರಮಕ್ಕೆ ಅಳವಡಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಇದರ ಪ್ರಮಾಣದ ಬಗ್ಗೆಯೂ ತಿಳಿದುಕೊಂಡು ಆ ಪ್ರಕಾರವೇ ಸೇವಿಸುವುದು ಅಗತ್ಯ.