ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಹಾಗೂ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ನನ್ನಅಮೆರಿಕದಿಂದ ಕರೆತರಲು ಮುಂಬೈ ಪೊಲೀಸ್ ಕ್ರೈಂ ವಿಭಾಗವು ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಿದೆ.
ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಪ್ರಕರಣಗಳ ವಿಶೇಷ ನ್ಯಾಯಾಲಯವು ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದ್ರೆ ಔಪಚಾರಿಕವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಾಲಯದ ಕೆಲವು ದಾಖಲೆಗಳಿಗಾಗಿ ನಾವು ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
Marigold: ಈ ವಿಧಾನ ಅನುಸರಿಸಿ ಚೆಂಡು ಹೂ ಬೆಳೆದರೆ 1 ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಗಳಿಸಬಹುದು!
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಎರಡು ಪ್ರಕರಣಗಳು ಮತ್ತು ಇತರ 18 ಪ್ರಕರಣಗಳಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾನೆ. ಇತ್ತೀಚೆಗಷ್ಟೇ ಎನ್ಐಎ ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಮುಂಬೈ ಪೊಲೀಸ್ ಮೂಲಗಳ ಪ್ರಕಾರ, ಅನ್ಮೋಲ್ ಬಿಷ್ಣೋಯ್ ಅಮೆರಿಕದಲ್ಲಿ ಇರುವುದಾಗಿ ತನಿಖಾ ಏಜೆನ್ಸಿ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಖಚಿತಪಡಿಸಿದ್ದಾರೆ. ಈ ನಡುವೆ ಅನ್ಮೋಲ್ ಕೆನಡಾದಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ.
ಸಿಧು ಮೂಸೆವಾಲಾ ಹತ್ಯೆ ಹಿಂದಿದ್ದ ಅನ್ಮೋಲ್:
18 ಪ್ರಕರಣಗಳಲ್ಲಿ ಆರೋಪಿ ಆಗಿರುವ ಅನ್ಮೋಲ್ ಸಿಧು ಮೂಸೆವಾಲಾ ಹತ್ಯೆ ಕೇಸ್ನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈತ ಮೂಸೆವಾಲಾ ಹತ್ಯೆಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದ. ಅಲ್ಲದೇ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಲಾಗಿದ್ದ ಟರ್ಕಿ ನಿರ್ಮಿತ ಟಿಟಾಸ್ ಪಿಸ್ತೂಲ್ ಮತ್ತು ಗ್ಲೋಕ್ ಬಂದೂಕು ಒದಗಿಸಿದ್ದೂ ಇವನೇ ಎಂಬ ಆರೋಪ ಇದೆ.