ಅನೇಕ ಜನರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುತ್ತಾರೆ. ಅವರು ಕೆಲವು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಸಹ ನಿರ್ವಹಿಸುವುದಿಲ್ಲ. ಇದರಿಂದಾಗಿ ಅವರ ಖಾತೆ ಮೈನಸ್ ಬ್ಯಾಲೆನ್ಸ್ ಆಗುತ್ತದೆ. ಆದರೆ ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ಸಾಮಾನ್ಯವಾಗಿ ಕನಿಷ್ಠ ಬ್ಯಾಲೆನ್ಸ್ ಇರುವುದಿಲ್ಲ. ಕೆಲವೊಮ್ಮೆ ಮಾತ್ರ ಮೈನಸ್ ಬ್ಯಾಲೆನ್ಸ್ ತೋರುತ್ತದೆ. ಅದು ಹೆಚ್ಚಾದಷ್ಟೂ ಬ್ಯಾಂಕ್ ದಂಡ ಹಾಕುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಅಂತಹ ಖಾತೆಯನ್ನು ಮುಚ್ಚಲು ಬ್ಯಾಂಕ್ಗೆ ಕೇಳಿದಾಗ, ಮೈನಸ್ ಇರುವ ಮೊತ್ತವನ್ನು ಮರುಪಾವತಿಸಲು ನಿಮಗೆ ತಿಳಿಸುತ್ತಾರೆ.
ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟಿದ್ದು. ಕೆಲವೊಮ್ಮೆ ಒಂದೇ ಬ್ಯಾಂಕ್ನ ಬೇರೆ ಬೇರೆ ಶಾಖೆಗಳಲ್ಲಿ ಈ ಬಗ್ಗೆ ಭಿನ್ನ ನೀತಿಗಳಿರಬಹುದು. ಗ್ರಾಮೀಣ ಭಾಗದ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ನಗರದ ಬ್ಯಾಂಕುಗಳಲ್ಲಿ ದಂಡ ವಿಧಿಸುವ ಪ್ರವೃತ್ತಿ ಹೆಚ್ಚು.
ಮಿನಿಮಮ್ ಬ್ಯಾಲನ್ಸ್ ಹೇಗೆ ಎಣಿಸಲಾಗುತ್ತದೆ?
ಎಚ್ಡಿಎಫ್ಸಿ, ಎಕ್ಸಿಸ್ ಇತ್ಯಾದಿ ಕೆಲ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ಗಳು ಕನಿಷ್ಠ 10,000 ರೂ ಹಣ ಹೊಂದಿರಬೇಕು ಎನ್ನುವ ನಿಯಮ ಇದೆ. ಇನ್ನೂ ಕೆಲ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ 1,000 ಇರುತ್ತದೆ. ಕೆಲ ಬ್ಯಾಂಕುಗಳು ಶೂನ್ಯ ಬ್ಯಾಲನ್ಸ್ ಸೌಲಭ್ಯ ಇರುವ ಎಸ್ಬಿ ಅಕೌಂಟ್ಗಳಿಗೆ ಅವಕಾಶ ಕೊಡುತ್ತವೆ.
ಒಂದು ತಿಂಗಳಲ್ಲಿ ಒಂದು ಎಸ್ಬಿ ಅಕೌಂಟ್ನ ಮಿನಿಮಮ್ ಬ್ಯಾಲನ್ಸ್ ಎಷ್ಟು ಎಂಬುದನ್ನು ಎಣಿಸಲು ಒಂದು ಕ್ರಮ ಇದೆ. ಪ್ರತೀ ದಿನದ ಅಂತ್ಯದಲ್ಲಿ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಆ ರೀತಿ ಎಲ್ಲಾ ದಿನಗಳಿಗೂ ಎಣಿಸಲಾಗುತ್ತದೆ. ಅದನ್ನು ಒಟ್ಟುಗೂಡಿಸಿ, ಒಂದು ತಿಂಗಳ 30 ಅಥವಾ 31 ದಿನಗಳಿಂದ ಅದನ್ನು ಭಾಗಿಸಿ ಸರಾಸರಿ ಮೊತ್ತವನ್ನು ಪಡೆಯಲಾಗುತ್ತದೆ. ಅದೇ ಮಿನಿಮಮ್ ಬ್ಯಾಲನ್ಸ್ ಆಗಿರುತ್ತದೆ.
ಆರ್ಬಿಐ ನಿಯಮ ಏನು ಹೇಳುತ್ತದೆ?
ಎಸ್ಬಿ ಖಾತೆಯಲ್ಲಿ ಹಣವು ಮಿನಿಮಮ್ ಬ್ಯಾಲನ್ಸ್ ಮಟ್ಟಕ್ಕಿಂತ ಕಡಿಮೆ ಹೋದಾಗ ಬ್ಯಾಂಕುಗಳು ಏಕಾಏಕಿ ದಂಡ ಹಾಕುವಂತಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ಅಥವಾ ಪತ್ರಗಳ ಮೂಲಕವೂ ಸಂವಹನ ನಡೆಸಿ ನೋಟೀಸ್ ನೀಡಬೇಕು. ಮಿನಿಮಮ್ ಬ್ಯಾಲನ್ಸ್ ತುಂಬಲು ಗ್ರಾಹಕರಿಗೆ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನೀಡಬೇಕು. ಆ ಬಳಿಕವಷ್ಟೇ ದಂಡ ಹಾಕಬಹುದು ಎಂದು ಆರ್ಬಿಐ 2014ರಲ್ಲಿ ರೂಪಿಸಿದ ನಿಯಮದಲ್ಲಿ ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲ, ಎಲ್ಲಾ ಪ್ರಕರಣದಲ್ಲೂ ಸಮಾನ ರೀತಿಯಲ್ಲಿ ದಂಡ ವಿಧಿಸುವಂತಿಲ್ಲ, ಅಥವಾ ತೀರಾ ದೊಡ್ಡ ಮಟ್ಟದಲ್ಲಿ ದಂಡ ವಿಧಿಸುವಂತಿಲ್ಲ. ಕನಿಷ್ಠ ಮೊತ್ತಕ್ಕಿಂತ ಎಷ್ಟು ಕಡಿಮೆ ಇದೆ, ಅದಕ್ಕೆ ಅನುಗುಣವಾಗಿ ದಂಡ ವಿಧಿಸಬೇಕು ಎಂದು ಆರ್ಬಿಐ ನಿಯಮ ಹೇಳುತ್ತದೆ. ಹಾಗೆಯೇ, ಪೆನಾಲ್ಟಿ ಹಣವನ್ನು ಕಟ್ಟಲು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸಬೇಕು ಎಂದೂ ನಿಯಮವು ಹೇಳುತ್ತದೆ.