ನವದೆಹಲಿ: ಒಲಿಂಪಿಕ್ಸ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ವಿರುದ್ಧ ಹೇಳಿಕೆ ನೀಡದಂತೆ ಮಾಜಿ ಸಂಸದ ಹಾಗೂ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಬಿಜೆಪಿ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹರಿಯಾಣ ವಿಧಾನಸಭಾ ಚುನಾವಣೆಗು ಮುನ್ನ ವಿನೇಶ್, ಪುನಿಯಾ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಈ ವಿಚಾರವಾಗಿ ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದಂತೆ ಬ್ರಿಜ್ ಭೂಷಣ್ ಅವರಿಗೆ ಪಕ್ಷದ ಹಿರಿಯ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತ ಬ್ರಿಜ್ ಭೂಷಣ್ ಸಿಂಗ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಕುಸ್ತಿಯಲ್ಲಿ ಹೆಸರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿದ ನಂತರ ಅವರ ಹೆಸರುಗಳು ಅಳಿಸಿ ಹೋಗಲಿವೆ. ತಾವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದುಬಿಡುತ್ತೇವೆ ಎಂದು ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ಭಾವಿಸಿದ್ದರೆ ಅದು ತಪ್ಪು.
ಅವರು ಹರ್ಯಾಣದ ಯಾವುದೇ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೂ, ಬಿಜೆಪಿಯ ಸಣ್ಣ ಅಭ್ಯರ್ಥಿ ಕೂಡ ಅವರನ್ನು ಸೋಲಿಸುತ್ತಾರೆ ಎಂದು ಸಿಂಗ್ ಹೇಳಿದ್ದರು. ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದಾಗ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್, ಇದು ಕಾಂಗ್ರೆಸ್ ಪಕ್ಷವು ತಮ್ಮ ವಿರುದ್ಧ ನಡೆಸಿದ್ದ ಸಂಚು. ಇದಕ್ಕೆ ಫೋಗಟ್ ಹಾಗೂ ಪೂನಿಯಾ ಅವರ ಕಾಂಗ್ರೆಸ್ ಸೇರ್ಪಡೆ ಸಾಕ್ಷಿ ಎಂದು ಹೇಳಿದ್ದರು.