ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸಂಗತಿಗಳನ್ನು ಭಾರತ ತಂಡದ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ.
ಕೆಎಲ್ ರಾಹುಲ್ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ 10 ಇನಿಂಗ್ಸ್ಗಳಿಂದ 75.33ರ ಸರಾಸರಿಯಲ್ಲಿ 452 ರನ್ಗಳನ್ನು ಗಳಿಸಿದ್ದರು. ಆದರೂ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಡಿದ್ದ 107 ಎಸೆತಗಳಲ್ಲಿ 66 ರನ್ಗಳನ್ನು ಗಳಿಸಿದ್ದರು. ಆದರೂ ಅವರು ಭಾರತ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಫೇಸ್ಬುಕ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ತಾವು ಎದುರಿಸಿದ್ದ ಕಠಿಣ ಸನ್ನಿವೇಶಗಳ ಬಗ್ಗೆ ಬಾಯ್ಬಿಟ್ಟ ಕನ್ನಡಿಗ ಕೆಎಲ್ ರಾಹುಲ್, ಈ ವೇಳೆ ಮಾನಸಿಕವಾಗಿ ಭಾರಿ ಹಿನ್ನಡೆಯಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಕುಂತರೂ, ನಿಂತರೂ ನನ್ನನ್ನು ಅಭಿಮಾನಿಗಳು ಬಹಳಷ್ಟು ಟ್ರೋಲ್ ಮಾಡಿದ್ದರು. ಆದರೆ, ಈ ವೇಳೆ ಎಲ್ಲಾ ಸಂಗತಿಗಳನ್ನು ಎದುರಿಸಿದ್ದೆ ಎಂದಿದ್ದಾರೆ ಕೆಎಲ್ ರಾಹುಲ್.
ಸೋಶಿಯಲ್ ಮೀಡಿಯಾ ಟ್ರೋಲ್ಗಳನ್ನು ನಿರ್ವಹಿಸುವುದರಲ್ಲಿ ನಾನು ಉತ್ತಮವಾಗಿದ್ದೇನೆ. ಇವೆಲ್ಲದಕ್ಕೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ ಹಾಗೂ ಆಗ ನಾನು ತುಂಬಾ ಕಿರಿಯ ಆಟಗಾರ ಎಂಬ ಭಾವನೆ ನನ್ನಲ್ಲಿ ಹುಟ್ಟುತ್ತಿತ್ತು. ಆದರೆ, ಎರಡು ವರ್ಷಗಳಲ್ಲಿಯೂ ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ನಿಂತರೂ, ಕುಂತರೂ ನನ್ನನ್ನು ಟ್ರೋಲ್ ಮಾಡಿದ್ದರು,” ಎಂದು ಹಿರಿಯ ಬ್ಯಾಟ್ಸ್ಮನ್ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.