ದೆಹಲಿ: ಧೈರ್ಯವೊಂದಿದ್ದರೆ ಎಂತಹ ಕಠಿಣ ಗುರಿಗಳನ್ನು ಸಹ ಸುಲಭವಾಗಿ ತಲುಪಬಹುದು ಎಂಬ ಮಾತಿದೆ. ಇದನ್ನು 2023ರ ಅರ್ಜನ ಪ್ರಶಸ್ತಿ ಪಡೆದ ಶೀತಲ್ ದೇವಿ (Sheetal Devi) ಸಾಬೀತುಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ಶೀತಲ್ ಕೈಗಳಿಲ್ಲದಿದ್ದರೂ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ (Para Asian Games) ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ತನ್ನ ಪಾದಗಳಿಂದ ಬಿಲ್ಲುಗಾರಿಕೆ ಮಾಡಿ ಕಳೆದ ವರ್ಷ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಅದ್ಭುತ ಸಾಧನೆಯನ್ನು ಗುರುತಿಸಿ ಶೀತಲ್ ದೇವಿ ಅವರಿಗೆ 2023ರ ಅರ್ಜುನ ಪ್ರಶಸ್ತಿಯನ್ನು (Arjuna Award) ನೀಡಿ ಗೌರವಿಸಲಾಗಿದೆ.
ಶೀತಲ್ ದೇವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕ್ರೀಡಾ ಗೌರವವನ್ನು ಸ್ವೀಕರಿಸಿದ ನಂತರ ಶೀತಲ್ ದೇವಿ ಅವರು ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ದಿನ ವಿಶೇಷವಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ವಿಡಿಯೋದ ಜೊತೆಗೆ ಬರೆದುಕೊಂಡಿದ್ದಾರೆ
ಶೀತಲ್ ದೇವಿ ಯಾರು?
ಶೀತಲ್ ಅವರು 2007ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಲೋಯಿಧಾರ್ ಗ್ರಾಮದಲ್ಲಿ ಫೋಕೊಮೆಲಿಯಾ ಎಂಬ ಅಪರೂಪದ ಕಾಯಿಲೆಯೊಂದಿಗೆ ಜನಿಸಿದರು. ಈ ಕಾಯಿಲೆಯಿಂದಾಗಿ ಅವರ ತೋಳುಗಳು ಸಂಪೂರ್ಣವಾಗಿ ರೂಪುಗೊಂಡಿರಲಿಲ್ಲ. ಈ ಅಂಗವೈಕಲ್ಯದ ನಡುವೆಯೂ 2023ರಲ್ಲಿ ಶೀತಲ್ ಅಂತಾರಾಷ್ಟ್ರೀಯ ಹಂತದಲ್ಲಿ ಅನೇಕ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ ಅವರ ಅಂಗವೈಫಲ್ಯ ಕ್ರೀಡೆಯನ್ನು ವೃತ್ತಿಜೀವನವನ್ನಾಗಿಸಲು ಬಿಡಲಿಲ್ಲ
ಶೀತಲ್ ದೇವಿಯವರ ಸಾಧನೆಗಳು:
2023ರಲ್ಲಿ ಶೀತಲ್ ದೇವಿ ಪ್ಯಾರಾ-ಆರ್ಚರ್ಗೆ (Para Archer) ಸೇರಿದರು. ಜೆಕ್ ರಿಪಬ್ಲಿಕ್ನಲ್ಲಿ ನಡೆದ ವರ್ಲ್ಡ್ ಆರ್ಚರಿ ಪ್ಯಾರಾ ಚಾಂಪಿಯನ್ಶಿಪ್ 2023ರಲ್ಲಿ ಓಪನ್ ಮಹಿಳಾ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ಬೆಳ್ಳಿ ಪದಕವನ್ನು ಪಡೆದರು. ಮೊದಲು ಪ್ಯಾರಾ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ ಇವರಾಗಿದ್ದಾರೆ.