ಬೆಳಗ್ಗೆಯ ತಿಂಡಿ ಮತ್ತು ಮಧ್ಯಾಹ್ನ ಊಟಕ್ಕೂ ಒಂದೇ ಆಗುವ ರೀತಿಯ ರೆಸಿಪಿ ಹೇಳುತ್ತಿದ್ದೇವೆ. ಪುಲಾವ್ ತಣ್ಣಗಾದ ನಂತರ ಬಹುತೇಕರಿಗೆ ಇಷ್ಟ ಆಗಲ್ಲ. ಇಂದು ನಾವು ಹೇಳುವ ಶೈಲಿಯಲ್ಲಿ ಪುಲಾವ್ ಮಾಡಿದ್ರೆ ತುಂಬಾನೇ ಸಾಫ್ಟ್ ಆಗಿರುತ್ತದೆ.
ಸೋಯಾಬೀನ್ ಮತ್ತು ಪಾಲಕ್ ಬಳಸಿ ತುಂಬಾನೇ ಸಾಫ್ಟ್ ಆಗಿ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಹೀಗೆ ಪುಲಾವ್ ತಯಾರಿಸಿದ್ರೆ ಎಲ್ಲರಿಗೂ ಇಷ್ಟವಾಗುತ್ತದೆ.
ಸೋಯಾಬೀನ್-ಪಾಲಕ್ ಪುಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ: ಒಂದು ಕಪ್
ಸೋಯಾಬಿನ್: ಒಂದು ಕಪ್
ಪಾಲಕ್: ಒಂದು ಕಪ್
ಪುದಿನಾ: ಅರ್ಧ ಕಪ್
ಕೋತಂಬರಿ ಸೊಪ್ಪು: ಒಂದು ಹಿಡಿಯಷ್ಟು
ಲವಂಗ: ಮೂರು
ಪುಲಾವ್ ಎಲೆ: ಮೂರು
ಚಕ್ಕೆ: ಅರ್ಧ ತುಂಡು
ಈರುಳ್ಳಿ: ಒಂದು
ಟೊಮೆಟೋ: ಒಂದು
ಹಸಿ ಮೆಣಸಿನಕಾಯಿ: ಎರಡು
ಹಸಿ ಶುಂಠಿ: ಅರ್ಧ ಇಂಚು
ಜೀರಿಗೆ: ಒಂದು ಟೀ ಸ್ಪೂನ್
ಗೋಡಂಬಿ: 10 ರಿಂದ 15
ಹುಣಸೆ ಹಣ್ಣು: ನಿಂಬೆ ಹಣ್ಣಿನ ಗಾತ್ರದಷ್ಟು
ತುಪ್ಪ: ಎರಡು ಟೀ ಸ್ಪೂನ್
ಅಡುಗೆ ಎಣ್ಣೆ: ಮೂರು ಟೀ ಸ್ಪೂನ್
ಸೋಯಾಬೀನ್-ಪಾಲಕ್ ಪುಲಾವ್ ಮಾಡುವ ವಿಧಾನ
*ಮೊದಲಿಗೆ ಸೋಯಾಬಿನ್ನ್ನು ತೊಳೆದುಕೊಂಡು ಒಂದು ಪಾತ್ರೆಗೆ ಹಾಕಿ ಬಿಸಿನೀರು ಸೇರಿಸಿ ನೆನೆಯಲು ಎತ್ತಿಟ್ಟುಕೊಳ್ಳು.
*ನಂತರ ಪ್ಯಾನ್ ಒಲೆಯ ಮೇಲಿಟ್ಟುಕೊಂಡು ಒಲೆ ಆನ್ ಮಾಡ್ಕೊಳ್ಳಿ. ಇದಕ್ಕೆ ಒಂದು ಟೀ ಸ್ಪೂನ್ ತುಪ್ಪ ಹಾಕಿ ಬಿಸಿ ಪಾಲಕ್ ಮತ್ತು ಹಸಿಮೆಣಸಿನಕಾಯಿಯನ್ನು ಫ್ರೈ ಮಾಡಿಕೊಳ್ಳಿ.
*ಫ್ರೈ ಮಾಡಿಕೊಂಡಿರುವ ಪಾಲಕ್, ಹಸಿಮೆಣಸಿನಕಾಯಿಯನ್ನು ಜಾರ್ಗೆ ಹಾಕಿಕೊಳ್ಳಿ. ಇದೇ ಜಾರ್ಗೆ ಕೋತಂಬರಿ ಸೊಪ್ಪು, ಪುದಿನಾ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
*ಈಗ ಕುಕ್ಕರ್ ಒಲೆ ಮೇಲಿಟ್ಟುಕೊಂಡು ಗ್ಯಾಸ್ ಆನ್ ಮಾಡಿಕೊಳ್ಳಿ. ಪಾತ್ರೆ ಬಿಸಿಯಾಗ್ತಿದ್ದಂತೆ ತುಪ್ಪ ಮತ್ತು ಎಣ್ಣೆ ಹಾಕಿಕೊಳ್ಳಿ. ತದನಂತರ ಲವಂಗ, ಚಕ್ಕೆ, ಗೋಡಂಬಿ ಮತ್ತು ಪುಲಾವ್ ಎಲೆ ಸೇರಿಸಿಕೊಂಡು ಫ್ರೈ ಮಾಡಿಕೊಳ್ಳಿ.
*ನಂತರ ಜೀರಿಗೆ ಮತ್ತು ಜಜ್ಜಿದ ಹಸಿಶುಂಠಿ ಸೇರಿಸಿ ಎರಡು ನಿಮಿಷ ಫ್ರೈ ಮಾಡಿ. ಆ ಬಳಿಕ ಉದ್ದವಾಗಿ ಕತ್ತರಿಸಿರುವ ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ. ಆಮೇಲೆ ಟೊಮೆಟೋ ಮತ್ತು ಹುಣಸೆಹಣ್ಣು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
*ಕೊನೆಗೆ ರುಬ್ಬಿಕೊಂಡಿರುವ ಮಸಾಲೆಯನ್ನು ಸೇರಿಸಿಕೊಂಡು ಕಲಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ನೆನಸಿಟ್ಟುಕೊಂಡಿರುವ ಸೋಯಾಬಿನ್ ಸೇರಿಸಿ ಮಸಾಲೆಯೊಂದಿಗೆ ಬೆರೆಯುವಂತೆ ಮಿಕ್ಸ್ ಮಾಡಿ.
*ಕೊನೆಗೆ ಮೂರು ಲೀಟರ್ ನೀರು ಸೇರಿಸಿ ಮತ್ತು ತೊಳೆದುಕೊಂಡಿರುವ ಅಕ್ಕಿ ಸೇರಿಸಿ ಮುಚ್ಚಳ ಮುಚ್ಚಿ ಮೂರು ಕೂಗು ಕೂಗಿಸಿಕೊಂಡರೆ ರುಚಿಯಾದ ಪಾಲಕ್-ಸೋಯಾಬಿನ್ ಪುಲಾವ್ ಸವಿಯಲು ಸಿದ್ಧವಾಗುತ್ತದೆ.