ಶಾರುಖ್ ಖಾನ್ (Shah Rukh Khan) ನಟನೆಯ ‘ಡಂಕಿ’ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಡಿ.21ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ಭಾನುವಾರದಂದು ತಮ್ಮ ನಿವಾಸ ಮನ್ನತ್ (Mannat) ಎದುರು ಜಮಾಯಿಸಿದ್ದ ನೂರಾರು ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ತಮ್ಮ ಸಿಗ್ನೇಚರ್ ಶೈಲಿಯ ಪೋಸ್ ನೀಡಿ ಫ್ಯಾನ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ.
ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ‘ಡಂಕಿ’ ಎನ್ನುವ ವಿಭಿನ್ನ ಟೈಟಲ್ ಕೂಡ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ‘ಮುನ್ನಾಭಾಯ್’ ಸರಣಿ, ‘ಪಿಕೆ’, ‘ಸಂಜು’ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕರು ಈ ಬಾರಿ ಯಾವ ಕಥೆ ಹೇಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ‘ಜೀರೊ’ ಸಿನಿಮಾ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಶಾರುಖ್ ಖಾನ್ ಈ ವರ್ಷ ‘ಪಠಾಣ್’ ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಚಿತ್ರ ಸಾವಿರ ಕೋಟಿ ರೂ. ಕಲೆಕ್ಷನ್ ಗಡಿ ದಾಟಿತ್ತು. ಬಳಿಕ ಬಂದ ‘ಜವಾನ್’ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗಾಗಿ ‘ಡಂಕಿ’ ಸಿನಿಮಾ ಬಗ್ಗೆ ಸಹಜವಾಗಿಯೇ ಕ್ರೇಜ್ ಹೆಚ್ಚಾಗಿತ್ತು.