ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಅಬ್ಬರಿಸಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ವಶಪಡಿಸಿಕೊಂಡಿದೆ. ರಾಯ್ಪುರದಲ್ಲಿ ಶುಕ್ರವಾರ ನಡೆದಿದ್ದ ನಾಲ್ಕನೇ ಟಿ20ಯಲ್ಲಿ ಕಾಂಗರೂಗಳ ವಿರುದ್ಧ ಟೀಮ್ ಇಂಡಿಯಾ 20 ರನ್ಗಳಿಂದ ಗೆದ್ದು ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ, ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತ ತಂಡ ಇದುವರೆಗೆ 213 ಪಂದ್ಯಗಳನ್ನು ಆಡಿದ್ದು, 136 ಪಂದ್ಯಗಳನ್ನು ಗೆದ್ದಿದೆ.
ಇದುವರೆಗೂ ಈ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಟಿ20 ಮಾದರಿಯಲ್ಲಿ ಪಾಕಿಸ್ತಾನ 226 ಪಂದ್ಯಗಳನ್ನು ಆಡಿದ್ದು, 135 ಪಂದ್ಯಗಳನ್ನು ಗೆದ್ದಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ20 ಗೆದ್ದ ನಂತರ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಮತ್ತೊಂದೆಡೆ ಈ ಗೆಲುವಿನೊಂದಿಗೆ ಭಾರತ ತಂಡ ಟಿ20 ಸರಣಿಯನ್ನೂ ಗೆದ್ದುಕೊಂಡಿದೆ. 2019ರಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ ಬಾರಿ ಸರಣಿ ಟಿ20 ಸರಣಿ ಸೋತಿತ್ತು.