ಬೆಂಗಳೂರು:- ಚುನಾವಣೆಯಲ್ಲಿ ಗ್ಯಾರಂಟಿಗಳು ಯಾವುದೇ ಪರಿಣಾಮ ಬೀರಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈ ಚುನಾವಣೆಯಲ್ಲಿ ಗ್ಯಾರಂಟಿಗಳು ಯಾವುದೇ ಪರಿಣಾಮ ಬೀರಿಲ್ಲ. ಉತ್ತರದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದರೆ ಇದು ಗೊತ್ತಾಗುತ್ತಿದೆ. ಗ್ಯಾರಂಟಿಗಳು ಠುಸ್ ಪಟಾಕಿ ಆಗಿವೆ. ತೆಲಂಗಾಣದಲ್ಲಿ ಬಿಆರ್ಎಸ್ ಕುಟುಂಬ ರಾಜಕೀಯ ಮಾಡಿದೆ. ತನ್ನ ತಪ್ಪಿನಿಂದಲೇ ಬಿಆರ್ಎಸ್ ತೆಲಂಗಾಣ ಕಳೆದುಕೊಂಡಿದೆ ಎಂದರು.
ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನ ಇಟ್ಟುಕೊಂಡು ಕಾಂಗ್ರೆಸ್ನವರು ರೆಸಾರ್ಟ್ ರಾಜಕಾರಣ ಮಾಡಲು ಹೊರಟಿದ್ದಾರೆ. ದೊಡ್ಡ ಶೋ ಕೊಡಲು ಡಿ.ಕೆ ಶಿವಕುಮಾರ್ ತೆಲಂಗಾಣಕ್ಕೆ ಹೋಗಿದ್ದಾರೆ. ಜನರ ಕಷ್ಟ ಮರೆತು ತೆಲಂಗಾಣ ಶಾಸಕರಿಗಾಗಿ ಡಿಸಿಎಂ ಹೋಗಿರುವುದು ನಾಚಿಕೆಗೇಡಿನ ವಿಷಯ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ತೆಲಂಗಾಣ ಕಾಂಗ್ರೆಸ್ನವರಿಗೆ ಧಮ್ ಇಲ್ಲ. ಬರಗಾಲ ಬಂದಾಗ ಸಿದ್ದರಾಮಯ್ಯನವರು ಕಣ್ಣೀರು ಸುರಿಸಿದ್ದೇ ಬಂತು. ಅವರದ್ದು ಬರೀ ಮೊಸಳೆ ಕಣ್ಣೀರು. ಅಧಿವೇಶನ ಇದೆ. ಆದರೆ, ಇವರು ತೆಲಂಗಾಣದ ಸೇವೆ ಮಾಡ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ತೆಲಂಗಾಣ ಶಾಸಕರನ್ನು ಇಲ್ಲಿಗೆ ಕರೆದುಕೊಂಡು ಬರಲಿ. ಅಧಿವೇಶನದಲ್ಲಿ ಬರದ ಬಗ್ಗೆ ಮಾತಾಡೋದನ್ನು ಬಿಟ್ಟು, ರೆಸಾರ್ಟ್ನಲ್ಲಿ ಶಾಸಕರ ಸೇವೆಯನ್ನು ಮಂತ್ರಿಗಳು ಮಾಡಲು ಹೊರಟಿದ್ದಾರೆ. ಅದರ ಪರಿಣಾಮ ಸರಿ ಇರುವುದಿಲ್ಲ. ಅವರಿಗೆ ಹೋರಾಟ, ಪ್ರತಿಭಟನೆಗಳ ಮೂಲಕ ತಕ್ಕ ಪಾಠ ಕಲಿಸುತ್ತೇವೆ ಎಂದರು.