ಕೆಆರ್ಪುರ:– ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು.
ಕೆಆರ್ಪುರ ಕ್ಷೇತ್ರದ ಹೊರಮಾವಿನ ಕಲ್ಕೆರೆ ಬಳಿ ಕನ್ನಡ ರಾಜ್ಯೋತ್ಸವ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಲಯನ್ಸ್ ಕ್ಲಬ್ ಮತ್ತು ಸಿವಿರಾಮನ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಿವಿ, ಮೂಗು, ಮತ್ತು ನೇತ್ರ ತಪಾಸಣೆ ಶಿಬಿರ ಮತ್ತು ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ಮತ್ತು ಕನ್ನಡಕಗಳನ್ನು ನೀಡುತ್ತಿದ್ದು ಬಡವರು ಇದರ ಸೇವೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿನಲ್ಲಿ ಕಳೆದ ಎರಡು ವರ್ಷದಿಂದ ಈ ಶಿಬಿರ ಆಯೋಜನೆ ಮಾಡುತ್ತಿದ್ದು, ಕ್ಷೇತ್ರದ 11 ವಾರ್ಡ್ನಲ್ಲಿ 11 ಜಾಗದಲ್ಲಿ ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನುಷ್ಯ ಏನು ಬೇಕಿದರೂ ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು.
ವಾರ್ಡ್ ಅಧ್ಯಕ್ಷ ಸುನೀಲ್ ಮಾತನಾಡಿ ಅವರು ಪುನೀತ್ ರಾಜ್ಕುಮಾರ್ ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಬಡವರು ಸದುಪಯೋಗ ಮಾಡಿಕೊಳ್ಳುವ ಉದ್ದೇಶದಿಂದ ಏರ್ಪಡಿಸಲಾಗಿದೆ ಎಂದರು.
ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಿದ್ದು, ಮನೆ ಮನೆಗೂ ತಲುಪಬೇಕೆಂಬ ಉದ್ದೇಶದಿಂದ ಈ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್,ಹಿರಿಯ ಮುಖಂಡ ಅಗರ ಆರ್.ಪ್ರಕಾಶ್, ವಾರ್ಡ್ ಅಧ್ಯಕ್ಷ ಸುನೀಲ್,ಪ್ರಸನ್ನ, ಬಾಬು, ಮುಖಂಡರಾದ ಅಕ್ಕಪ್ಪ, ಸೋಮಣ್ಣ, ಕುಮಾರ್, ಸರಿತಾ, ಡಾ.ರಾಜೇಶ್ ಮತ್ತಿತರರಿದ್ದರು.