ತುಮಕೂರು:- ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆ ಬಳಿಕ ಗೋವಿಂದ ಆಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯರನ್ನು ಇಳಿಸಲು ಡಿ.ಕೆ.ಶಿವಕುಮಾರ್ ಪರ ಗ್ಯಾಂಗ್ ಈಗಾಗಲೇ ರೆಡಿ ಆಗಿ ಕೂತಿದೆ. ಇನ್ನೊಂದು ಕಡೆ ಶಿವಕುಮಾರ್ ಅವರನ್ನು ಸಿಕ್ಕಿಹಾಕಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ಮಾಡಿದ್ದಾರೆ. ನಾಲ್ಕು ಜನ ಸೇರಿ ಶಿವಕುಮಾರ್ಗೆ ಖೆಡ್ಡಾ ತೋಡಲು ರೆಡಿ ಮಾಡಿದ್ದಾರೆ ಎಂದರು. ಹಿಂದೆ ಮೈತ್ರಿ ಸರ್ಕಾರವನ್ನು ಬೀಳಿಸುವುದಕ್ಕೆ ಬೆಳಗಾವಿಯಲ್ಲಿಯೇ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ತಯಾರಿ ನಡೀತಾ ಇದೆ. ಇವೆಲ್ಲ ಬೆಳವಣಿಗೆಯನ್ನು ನೋಡಿದರೆ ಶೀಘ್ರ ಸರ್ಕಾರ ಗೋವಿಂದ ಆಗಲಿದೆ ಎಂದರು.
ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಯಾರಿಗೆ ಎಷ್ಟು ಸೀಟು ಅನ್ನೋದು ಇನ್ನೂ ನಿರ್ಧಾರ ವಾಗಿಲ್ಲ. ರಾಷ್ಟ್ರೀಯ ನಾಯಕರು, ಜೆಡಿಎಸ್ ವರಿಷ್ಠ ದೇವೇಗೌಡರು ಸೇರಿ ತೀರ್ಮಾನ ಮಾಡುತ್ತಾರೆ ಎಂದ ಅವರು, ಮೊದಲೆಲ್ಲ 24, 25 ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ 28 ಕ್ಷೇತ್ರಗಳಲ್ಲಿಯೂ ನಾವು ಟಫ್ ಫೈಟ್ ಕೊಡುತ್ತೇವೆ ಎಂದರು.
ರೈತರು ಸಾಲ ಮನ್ನಾ ಮಾಡ್ಬೇಕು ಅಂತಾ ಹೇಳುತ್ತಿದ್ದಾರೆ, ರೈತರ ಸಮಸ್ಯೆ ಏನು ಅನ್ನೋದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತಿದ್ದೇವೆ. ಇನ್ನು ಈ ಚಳಿಗಾಲದ ಅಧಿವೇಶನದಲ್ಲಿ ಬರಗಾಲದ ವಿಚಾರವನ್ನೇ ಮೊದಲಿಗೆ ಎತ್ತಿಕೊಳ್ಳಲಿದ್ದೇವೆ. ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ ಎಂದರು.