ಬೆಂಗಳೂರು:- ಕೋರ್ಟ್ನಿಂದ ಜಾಮೀನು ಪಡೆದಿದ್ದರೂ, ಬಂಧನಕ್ಕೆ ಆದೇಶ ಹೊರಡಿಸಿದ್ದ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ.
ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಎರಡನೇ ಎಫ್ಐಆರ್ ರದ್ದು ಕೋರಿ ಶಿವಮೂರ್ತಿ ಶರಣರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಅರ್ಜಿ ವಿಚಾರಣೆ ನಡೆಸಿದರು. ನ್ಯಾಯಪೀಠದ ಎದುರು ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡಿಸಿ, ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ”ಆರೋಪಿ ಯಾರೇ ಇರಲಿ ಅದು ನಮಗೆ ಮುಖ್ಯವಲ್ಲ. ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುವ ಯತ್ನವನ್ನು ನ್ಯಾಯಾಲಯ ಒಪ್ಪುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸದಿರುವ ಈ ಕ್ರಮ ಸರಿಯಾದುದಲ್ಲ. ಆದೇಶದ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಗಮನ ಹರಿಸಬಹುದಿತ್ತು, ಸ್ವಾಮೀಜಿ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಸಿದಂತೆ ಎಲ್ಲ ದಾಖಲೆಗಳನ್ನು ತನ್ನ ಮುಂದೆ ಇಡಬೇಕು. ಜೊತೆಗೆ ಈ ಆದೇಶದ ಪ್ರತಿಯನ್ನು ಪರಿಶೀಲನೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟರ್ಗೆ ನಿರ್ದೇಶಿಸಿತು.
ಇದೇ ವೇಳೆ, ಮುರುಘಾ ಶರಣರ ಕೇಸ್ಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಸರ್ಕಾರದ ಅಭಿಯೋಜಕರ ವಿರುದ್ಧ ವಿಚಾರಣೆಗೆ ನ್ಯಾಯಪೀಠ ಆದೇಶ ನೀಡಿದೆ.