ಹಲಗೂರು’:– ಬರ ಪರಿಹಾರ ನೀಡಲು ಸಿದ್ಧ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಬಳಿ ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದು, ತಕ್ಷಣವೇ ಮಂತ್ರಿ ಮಂಡಲದ ಸಭೆ ಕರೆದು ರಾಜ್ಯ ಸರ್ಕಾರವು ಸಮಸ್ತ ರೈತರ ಪರವಾಗಿ ನಿಲ್ಲಲಿದೆ’ ಎಂದರು
ರಾಜ್ಯದ ಜನತೆ 26 ಸಂಸದರನ್ನು ಗೆಲ್ಲಿಸಿರುವುದನ್ನು ಬಿಜೆಪಿ ಮರೆತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದನ್ನು ಬಿಜೆಪಿ ಸಹಿಸದೇ ಬರ ಪರಿಹಾರ ಅನುದಾನ ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.
‘ಸಂಪುಟ ಸಭೆಯಲ್ಲಿ ಮಂಜೂರಾತಿ ಪಡೆದು ಕೇಂದ್ರ ಸರ್ಕಾರಕ್ಕೆ ಬರ ಅಧ್ಯಯನ ವರದಿ ಸಲ್ಲಿಸಿದ್ದು, 226 ತಾಲ್ಲೂಕುಗಳಲ್ಲಿ ‘ಬರ ಘೋಷಣೆ’ ಮಾಡಲಾಗಿದೆ. ಹಲವು ಹಂತದ ಕೆಲಸಗಳು ಮುಗಿದಿದ್ದು, ಪರಿಹಾರ ನೀಡುವ ಹಂತದಲ್ಲಿದ್ದೇವೆ. ಕೇಂದ್ರ ಸರ್ಕಾರದ ಪರಿಹಾರ ಘೋಷಣೆಗಾಗಿ ಕಾಯುತ್ತಿದ್ದು, ರಾಜ್ಯದ ಜನರಿಗೆ ₹75 ಸಾವಿರ ಕೋಟಿಯನ್ನು ವಿವಿಧ ರೀತಿಯಲ್ಲಿ ಪರಿಹಾರ ನೀಡಲು ಯೋಜನೆ ರೂಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೆಚ್ಚು ಬೆಳೆ ಹಾನಿ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದು, ಈ ನಿಟ್ಟಿನಲ್ಲಿ ಇಂದು ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯ ವರದಿ ನೀಡಲಾಗುವುದು’ ಎಂದರು.
ಬರ ಪರಿಹಾರ ಹಣ ದುರುಪಯೋಗ ಆಗಬಾರದು ಎಂದು ಈಗಾಗಲೇ ಬೆಳೆ ಸರ್ವೇ ಮಾಡಿದ್ದು, ಫಲಾನುಭವಿಗಳ ಖಾತೆ ಸಂಖ್ಯೆ ಸಂಗ್ರಹಿಸಿದ್ದು, ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.