ಬೆಂಗಳೂರು: ನನ್ನನ್ನು ಅಮಾನತು ಮಾಡಿರೋ ಪಕ್ಷದ ನಿರ್ಧಾರವೇ ಕಾನೂನು ಬಾಹಿರ ಎಂದು ಮತ್ತೆ ದೇವೇಗೌಡ (HD Deve Gowda) ಹಾಗೂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.
ಅಮಾನತು ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಪ್ರಧಾನಿ ಆಗಿದ್ದರು. 70 ವರ್ಷ ರಾಜಕೀಯದಲ್ಲಿ ಇರೋರು. ದೇವೇಗೌಡರು ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದಿದ್ದೇ ತಪ್ಪು. ನನ್ನನ್ನು ತೆಗೆಯಬೇಕಾದ್ರೆ ಸಭೆ ಮಾಡಿ 2/3 ಮೆಜಾರಿಟಿಯಲ್ಲಿ ತೆಗೆಯಬೇಕು. ಇಲ್ಲದೆ ಹೋದ್ರೆ ಅವಧಿ ಮುಗಿಯಬೇಕು. ಇಲ್ಲ ನಾನು ಸಾಯಬೇಕು ಎಂದು ಹೇಳಿದರು.
ಕೇರಳದಲ್ಲಿ ಮೀಟಿಂಗ್ ಕರೆದಿದ್ದು ನಾನು ಅಲ್ಲ. ರಾಷ್ಟ್ರೀಯ ಉಪಾಧ್ಯಕ್ಷ ಸಿಕೆ ನಾನು ಕರೆದಿದ್ದರು. 12 ರಾಜ್ಯದ ಜಿಲ್ಲಾ ಅಧ್ಯಕ್ಷರು ಆ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ದೇವೇಗೌಡರು ಮಗನ ಮಾತು ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ಕೊಡೋಣ ಅಂತ ತೀರ್ಮಾನ ಆಗಿದೆ ಎಂದರು.
ಕುಮಾರಸ್ವಾಮಿ ಏಕಾಏಕಿಯಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಡಿಸೆಂಬರ್ 9 ರವರೆಗೂ ಅವಕಾಶ ಕೊಡಲಾಗಿದೆ. ಡಿಸೆಂಬರ್ 9ರ ಒಳಗೆ ನಿರ್ಧಾರ ವಾಪಸ್ ಮಾಡದೇ ಹೋದರೆ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದಾರೆ. ನಾನೇನು ಈ ಸಭೆ ಮಾಡಿಲ್ಲ. ಉಪಾಧ್ಯಕ್ಷರು ಕರೆದಿದ್ದರು ಅದಕ್ಕೆ ಹೋದೆ. ದೇವೇಗೌಡರು ಇಂತಹ ಒಂದು ಸಭೆ ಮಾಡಿಲ್ಲ. ಜಿಟಿ ದೇವೇಗೌಡ ಸಭೆ ಮಾಡಿದ್ರು. ಅವರ ಹತ್ರ ಮಾತಾಡಿಸ್ತಾರೆ ಅಷ್ಟೇ. ಇದು ಫ್ಯಾಮಿಲಿ ಆಂಡ್ ಕೋರ್ಟ್ ತರಹ ಆಗಲ್ಲ. ಇಷ್ಟು ದಿನ ಹಾಗಿತ್ತು. ಈಗ ಅದು ಆಗಲ್ಲ. ನನ್ನ ತೆಗೆದಿದ್ದೇ ತಪ್ಪು ಅಂತ ಕೋರ್ಟ್ಗೆ ಹೋಗ್ತೀನಿ. ಬಿಜೆಪಿ ಜೊತೆ ಹೋಗಿ ಕುಮಾರಸ್ವಾಮಿ ಮಾತಾಡಿದ್ರು. ಅವರ ಮೇಲೆ ದೇವೇಗೌಡ ಅಮಾನತು ಮಾಡಬೇಕು. ಅದು ಬಿಟ್ಟು ನನ್ನನ್ನು ಅಮಾನತು ಮಾಡಿದ್ದೇ ನಿಯಮಬಾಹಿರ ಎಂದು ಕಿಡಿಕಾರಿದರು.