ಬೆಂಗಳೂರು: ಆರ್ ಅಶೋಕ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ರಾಜ್ಯ ಬಿಜೆಪಿಗೆ ಬೇರೆಯದ್ದೇ ಖದರ್ ಬಂದಂತಿದೆ, ಪಕ್ಷದ ಶಾಸಕರಿಗೆ ಸಮನ್ವಯತೆಯ ಪಾಠ ಹೇಳುತ್ತಿರುವ ಸಾಮ್ರಾಣ ಹಿರಿಯ ನಾಯಕರ ಸಲಹೆ ಸೂಚನೆಗಳ ಜೊತೆ ಮಠಾಧೀಶರ ಆಶೀರ್ವಾದ ಪಡೆಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಕೆಂಡ ಕಾರುತ್ತಿರುವ ಕೇಸರಿ ಸಾಮ್ರಾಟ ಸಿದ್ದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ನಾಳೆಯಿಂದ ರಾಜ್ಯಾದ್ಯಂತ ಬರ ಪ್ರವಾಸ ಆರಂಭಿಸ್ತಿದ್ದಾರೆ. ಅಶೋಕ್ ಆಡುತ್ತಿರುವ ಮಾತುಗಳು ಕೈ ನಾಯಕರಿಗೆ ಎಚ್ಚರಿಕೆಯ ಕರೆಗಂಟೆಯಾಗ್ತಿವೆ.
ಬಿಜೆಪಿಗೆ ಇಬ್ಬರು ಸಾರಥಿಗಳು ಸಿಕ್ಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ್ ಆಯ್ಕೆಯಾಗಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಪಕ್ಷ ಸಂಘಟನೆಗಾಗಿ ಸುತ್ತಾಡ್ತಿದ್ದಾರೆ. ಇಬ್ಬರು ನಾಯಕನ ಆಯ್ಕೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಸರ್ಕಾರದ ವಿರುದ್ಧ ಮೊದಲ ಪೂರ್ಣ ಪ್ರಮಾಣದ ಹೋರಾಟಕ್ಕೆ ಬೆಳಗಾವಿ ಅಧಿವೇಶನಲ್ಲಿ ವೇದಿಕೆಯೂ ಸಿದ್ದವಾಗಿದೆ. ರಾಜ್ಯಾಧ್ಯಕ್ಷ ಬದಲಾವಣೆ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕುಗ್ಗಿತ್ತು. ಜೊತೆಗೆ ಆಂತರಿಕವಾಗಿ ಭಿನ್ನಾಭಿಪ್ರಾಯಗಳೂ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದ್ದವು. ಆದರೆ ಇದೀಗ ವಿಜಯೇಂದ್ರ ಹಾಗೂ ಆರ್. ಅಶೋಕ್ ಜೋಡೆತ್ತು ಪಕ್ಷಕ್ಕೆ ಪುನಶ್ಚೇತನ ನೀಡ್ತಿದ್ದಾರೆ….
ಇನ್ನು ನಾಳೆಯಿಂದ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಪ್ರವಾಸ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಂದಾಗಿದ್ದರೆ. ವಿಜಯನಗರದ ಆದಿಚುಂಚನಗಿರಿ ಶಾಖ ಮಠದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಬರಗಾಲದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ಜೊತೆ ಮಾತನಾಡಿದ್ದು, ಈ ಅಧಿವೇಶನದಲ್ಲಿ ಭ್ರಷ್ಟಾಚಾರ ವಿಚಾರ ಹಿಡಿದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹರಿಹಾಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಭಾಗಿಯಾಗಿರುವುದು ಹಾಗೂ ಜಮೀರ್ ಅಹ್ಮದ್ ಖಾನ್ ಅವರು ಕೋಮುವಾದ ಬಿತ್ತುತ್ತಿರುವ ವಿಚಾರದ ಕುರಿತು ಅಧಿವೇಶನದಲ್ಲಿಸರ್ಕಾರದ ವಿರುದ್ಧ ಚಾಟಿ ಬಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗುಡುಗಿದ್ರು…
ರಾಜ್ಯದ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದ್ದು, ಎಚ್ಚರಿಸುವ ಕೆಲಸ ಮಾಡಬೇಕಿದೆ. ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಆದರೂ ಎಚ್ಚರವಾಗದಿದ್ದರೆ ಬೇರೆ ಮದ್ದು ಹುಡುಕುತ್ತೇವೆ. ಎಲ್ಲ ವಿಚಾರವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ…ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಸದನದಲ್ಲಿ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರ ಚರ್ಚೆ ಮಾಡುತ್ತೇವೆ. ರಾಜ್ಯದ ಜನರ ಸಮಸ್ಯೆ ವಿಚಾರವಾಗಿ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತೇವೆ. ಉತ್ತರ ಕರ್ನಾಟಕದ ವಿಚಾರಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಜೆಡಿಎಸ್ ಕೂಡ ಬೆಂಬಲ ನೀಡಲಿದ್ದು, ಬರ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು…
ಒಟ್ನಲ್ಲಿ ಸಿಎಂ ಪುತ್ರ ಯಾತಿಂದ್ರ ವಿಚಾರ ಸೇರಿ ಹಲವು ವಿಚಾರಗಳನ್ನ ಮುಂದಿಟ್ಟು ಸರ್ಕಾರ ವಿರುದ್ಧ ಚಾಟಿ ಬಿಸಲು ಬಿಜೆಪಿ ಸಜ್ಜಾಗಿದ್ದು, ಈ ಬಾರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಜಂಟಿ ಅಧಿವೇಶನದಲ್ಲಿ ಸರ್ಕಾರಕ್ಕೆ ಚಳಿ ಬಿಡಿಸುವ ಕೆಲಸ ಸಮರ್ಥವಾಗಿ ವಿರೋಧ ಪಕ್ಷ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ…..