ಬೀದರ್:- ಸಿದ್ದರಾಮಯ್ಯ ಸುಳ್ಳಿನ ಮುಖ್ಯಮಂತ್ರಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಸುಳ್ಳಿನ ಮುಖ್ಯಮಂತ್ರಿ. ರೈತರಿಗೆ ಕೊಟ್ಟ ಮಾತು ಮುರಿಯುತ್ತಿದ್ದಾರೆ. ಹಣದ ಹಿಂದೆ ಬಿದ್ದಿದ್ದಾರೆ’ ಎಂದರು.
ಅಧಿಕಾರ ಹಿಡಿಯಲು ಏನೇನು ನಾಜೂಕುತನ, ಸುಳ್ಳು ಹೇಳಬೇಕಿತ್ತೋ ಹೇಳಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ನಂತರ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅವುಗಳನ್ನು ಹಿಂತೆಗೆದುಕೊಂಡಿತು. ಆದರೆ, ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದರು. ಇದರ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಸಿದಾಗ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಮ್ಮ ಹೋರಾಟಗಳಲ್ಲಿ ಭಾಗವಹಿಸಿ, ನಮ್ಮ ಸರ್ಕಾರ ಬಂದ ನಂತರ ಮೂರೂ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಬಹಳ ನಾಜೂಕಿನಿಂದ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ಶಕ್ತಿ ಇಲಾಖೆಯಿಂದ ಹಿಂದೆ ನೆರವು ನೀಡಲಾಗುತ್ತಿತ್ತು. ಈಗ ಹೊಸದಾಗಿ ಆದೇಶ ಹೊರಡಿಸಿ, ರೈತರು ಅವರ ಖರ್ಚಿನಲ್ಲಿಯೇ ಅಗತ್ಯ ವಸ್ತುಗಳನ್ನು ತರಿಸಿಕೊಂಡು ಸಂಪರ್ಕ ಪಡೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ. ರೈತರ ಹಿತ ಕಾಪಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಓಟಿಗಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಹೊರತು ರೈತರು, ಜನಸಾಮಾನ್ಯರ ಕಲ್ಯಾಣಕ್ಕಾಗಿ ಅಲ್ಲ. ಹಿಂದೆ ಬಿಜೆಪಿಯವರು ಏನು ಮಾಡುತ್ತಿದ್ದರೋ ಅದನ್ನೇ ಈಗ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಹೆಸರಷ್ಟೇ ಬದಲಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುತ್ತಾರೆ ಎಂದು ರೈತರು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ರಾಜಕೀಯ ಪಕ್ಷವೊಂದನ್ನು ಬೆಂಬಲಿಸಿದ್ದರು. ಆದರೆ, ಹಾಲಿ ಸರ್ಕಾರ ಮಾಡುತ್ತಿರುವುದೇ ಬೇರೆ ಎಂದರು.