ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಿದೆ ಎಂದು ಮುಖ್ಯ ಕೋಚ್ ರಾಹುಲ್ ಡ್ರಾವಿಡ್ (Rahul Dravid) ಹೇಳಿದರು.
ದ್ರಾವಿಡ್ ಅವರ 2 ವರ್ಷಗಳ ಒಪ್ಪಂದವು ಭಾನುವಾರಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದರು
ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ (Cricket) ಆಟಗಾರರ ಜೊತೆ ಕೆಲಸ ಮಾಡಿದ್ದೇನೆ. ಇದೊಂದು ನನಗೆ ಸಿಕ್ಕಿದ ಉತ್ತಮ ಅವಕಾಶ ಎಂದು ಅವರು ಹೇಳಿದರು. ಮುಂದಿನ ವಿಶ್ವಕಪ್ 4 ವರ್ಷಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. 2027ರ ವಿಶ್ವಕಪ್ ಬಗ್ಗೆ ನಾನು ಯೋಚಿಸಿಲ್ಲ. ಅಲ್ಲಿ ಯಾರು ಇರುತ್ತಾರೊ..? ಯಾರು ಅಲ್ಲಿಗೆ ಹೋಗುತ್ತಾರೊ.. ಅದಕ್ಕೆ ಸಾಕಷ್ಟು ಸಮಯವಿದೆ ಎಂದರು.
ಅಸಾಧಾರಣ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ (Rohit Sharma) ಈ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಮಿನಲ್ಲಿ ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದ್ದಾರೆ. ನಮ್ಮ ಯಾವುದೇ ಸಂಭಾಷಣೆ, ಸಭೆಗೆ ಅವರು ಯಾವಾಗಲೂ ಲಭ್ಯವಿರುತ್ತಿದ್ದರು. ಸಾಕಷ್ಟು ಯೋಜನೆಗಳು, ಸಾಕಷ್ಟು ಕಾರ್ಯ ತಂತ್ರಗಳನ್ನು ರೂಪಿಸಿದ್ದೆವು ಎಂದು ದ್ರಾವಿಡ್ ಹೇಳಿದರು.