ವಿಜಯಪುರ:-ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ತಿಕೋಟಾ ತಾಲೂಕಿನಲ್ಲಿ ಅತೀ ಹೆಚ್ಚು ಪಂಚಮಸಾಲಿ ಸಮಾಜದವರು ಇರುವ ಗ್ರಾಮವೆಂದರೆ ಅದು ಕನಮಡಿ ಗ್ರಾಮ, ಇಲ್ಲಿಯೇ ಪಂಚಮಸಾಲಿ ಸಮಾಜದ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ ಮಾಡಲಿದ್ದೇವೆ” ಎಂದರು.
“ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವ ಮಾಡಬೇಕೆಂದು ಸಮಾಜದ ಬಾಂಧವರು ಆಲೋಚನೆ ಮಾಡಿರುವುದರಿಂದ ನವೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಚೆನ್ನಮ್ಮನ ಭಾವಚಿತ್ರದ ಭವ್ಯವಾದ ರ್ಯಾಲಿ ಮೂಲಕ, ಕನಮಡಿ ಮತ್ತು ವಿಜಯಪುರ ನೂತನ ರಾಜ್ಯ ಹೆದ್ದಾರಿಯಲ್ಲಿ 30 ನಿಮಿಷ ರಸ್ತೆ ಬಂದ್ ಮಾಡುತ್ತೇವೆ. ಈ ವೇಳೆ ಇಷ್ಟಲಿಂಗ ಪೂಜೆ ಜೊತೆ ಹೋರಾಟ ಮಾಡಿ, ಪಕ್ಕದಲ್ಲಿರುವ ಧರಿದೇವರ ಪ್ರೌಢಶಾಲೆ ಆವರಣದಲ್ಲಿ ಬೃಹತ್ ಸಮಾವೇಶವನ್ನು ಮಾಡಲಾಗುತ್ತದೆ. ಈ ಮೂಲಕ ತಿಕೋಟಾದಲ್ಲಿಯೂ ಸಮಾಜ ಜಾಗೃತಿಗೊಳಿಸುವ ಕೆಲಸ ಮಾಡಬೇಕೆಂದು ಸಮಾಜದ ಮುಖಂಡರೆಲ್ಲಾ ಸೇರಿ ಆಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ” ಎಂದು ತಿಳಿಸಿದರು
ಬರುವ ಚಲಿಗಾಲದ ಅಧಿವೇಶನದ ಒಳಗಾಗಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸುವ ಮೂಲಕ ಈ ಸಮಾಜದ ಮೀಸಲಾತಿ ಹೋರಾಟಕ್ಕೆ ಭರವಸೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕುರುಬ ಮತ್ತು ಕುಂಚಿಟಿಗ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಪಂಚಮಸಾಲಿಗಳು ಮನೆ – ಮಠ ಬಿಟ್ಟು ಮೂರು ವರ್ಷಗಳಿಂದ ನಿಸ್ವಾರ್ಥ, ಪ್ರಾಮಾಣಿಕವಾದ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಪರವಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ 18 ಜಿಲ್ಲೆಗಳಿಂದ ಸರ್ವೆ ರಿರ್ಪೋಟ್ ಬಂದಿದೆ. ಇಷ್ಟೆಲ್ಲಾ ಇದ್ದರೂ ಮುಖ್ಯಮಂತ್ರಿಗಳು ನಿರ್ಲಕ್ಷ್ಯ ಮಾಡದೆ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲು ಮುನ್ನುಡಿ ಬರೆಯಬೇಕು ಎಂದು ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.