“ಬಿಗ್ ಬಾಸ್” ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ, ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಹಿರಿಯನಟ ಶ್ರೀನಿವಾಸಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಫಸ್ಟ್ ನೈಟ್ ವಿತ್ ದೆವ್ವ” ಹಾರಾರ್ ವಿತ್ ಕಾಮಿಡಿ ಜಾನರ್ ನ ಚಿತ್ರ ಎಂದು ಮಾತನಾಡಿದ ನಾಯಕ ಪ್ರಥಮ್, ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನಾನು ಈ ಚಿತ್ರಕ್ಕೆ ಕಥೆ ಬರೆಯಲು “ವಿಕ್ರಮ್ ಮತ್ತು ಬೇತಾಳ” ಕಥೆ ಸ್ಪೂರ್ತಿ. ಸಾಕಷ್ಟು ಹಾರಾರ್ ಚಿತ್ರ ಬಂದಿದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ. ನಿಖಿತ ಅವರು ನನ್ನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಮುಂತಾದವರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಮಾನ್ಯ ಸಿಂಗ್ ದೆವ್ವದ ಪಾತ್ರ ಮಾಡುತ್ತಿದ್ದಾರೆ. ನನ್ನ ಸ್ನೇಹಿತ ನವೀನ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಥಮ್ ಬರೆದಿರುವ ಕಥೆ ಚೆನ್ನಾಗಿದೆ. ನಾನು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ. ಇಂದಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಹಾಡಿನ ಚಿತ್ರೀಕರಣ ಹೊರದೇಶದಲ್ಲಿ ನಡೆಯಲಿದೆ ಎಂದರು ನಿರ್ದೇಶಕ ಪಿ.ವಿ.ಆರ್ ಸ್ವಾಮಿ.
ಚಿತ್ರದ ನಾಯಕಿರಾದ ನಿಖಿತ ಹಾಗೂ ಮಾನ್ಯ ಸಿಂಗ್, ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಶ್ರೀನಿವಾಸಮೂರ್ತಿ, ಸಂಗೀತ, ಹರೀಶ್ ರಾಜ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಅದ್ವಿಕ್ ವರ್ಮ ಹಾಗೂ ಸಂಭಾಷಣೆ ಬರೆದು ಸಂಕಲನ ಕಾರ್ಯವನ್ನು ಮಾಡುತ್ತಿರುವ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.