ಕ್ರೀಡಾಭಿಮಾನಿಗಳು ಹಾಗೂ ಇಡೀ ಭಾರತವೇ ಕಾತುರದಿಂದ ಕಾಯುತ್ತಿರುವ ಇಂಡಿಯಾ V/s ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಭಾರತ ತಂಡ ಗೆಲ್ಲಲಿ ಎಂದು ನಾನಾ ರೀತಿ ಪ್ರಾರ್ಥನೆ ಪೂಜೆಗಳನ್ನು ಮಾಡಲಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರನಿಗೆ ಒಂದೊಂದು ನಿವೇಶನ ನೀಡುವುದಾಗಿ ಹೇಳಿದ್ದಾರೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ಲೀಗ್ ಹಂತದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, ಸೆಮೀಸ್ನಲ್ಲೂ ಜಯದ ಓಟ ಮುಂದುವರೆಸಿ ಫೈನಲ್ಗೆ ಪ್ರವೇಶಿಸಿದೆ. ತಂಡ ಎಲ್ಲ ವಿಭಾಗದಲ್ಲೂ ಅದ್ಭುತವಾಗಿದ್ದು, ಗೆಲ್ಲುವ ಫೇವರಿಟ್ ಆಗಿದೆ.
ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರರಿಗೆ ನಿವೇಶನ ಒಂದನ್ನು ನೀಡುವುದಾಗಿ ರಾಜ್ಕೋಟ್ ಜಿಲ್ಲಾ ಬಿಜೆಪಿ ನಾಯಕ ಕೆಯೂರ್ ಧೋಲಾರಿಯಾ ಘೋಷಿಸಿದ್ದಾರೆ. “ಭಾರತ ತಂಡ ವಿಶ್ವಕಪ್ ಗೆದ್ದರೆ 15 ಆಟಗಾರರು, ಕೋಚ್ ಸೇರಿದಂತೆ 16 ಮಂದಿಗೆ ನಿವೇಶನ ನೀಡಲಾಗುವುದು. ಈ ನಿವೇಶನಗಳು ಭಯಸರ್ – ಕತ್ರೋಟ್ ಶಿವಂ ಜೆಮಿನ್ ಇಂಡಸ್ಟ್ರೀಸ್ ವಲಯದಲ್ಲಿದೆ” ಎಂದು ರಾಜ್ಕೋಟ್ ತಾಲೂಕಿನ ಸರಪಂಚ್ ಸಂಘದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಕೆಯೂರ್ ಧೋಲಾರಿಯಾ ಹೇಳಿದ್ದಾರೆ.
ರಾಜ್ಕೋಟ್ ಬಳಿ ಲೊಥ್ರಾ ಇಂಡಸ್ಟ್ರೀಸ್ ವಲಯದ 50 ಎಕರೆ ಪ್ರದೇಶದಲ್ಲಿ ನಾವು ಶಿವಂ ಇಂಡಸ್ಟ್ರೀಸ್ ವಲಯವನ್ನು ನಿರ್ಮಿಸುತ್ತಿದ್ದೇವೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಅಲ್ಲಿ ಆಟಗಾರರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಆಟಗಾರರಿಗೆ ನೀಡಿರುವ ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ನಾವು ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ ಭಾರತೀಯ ಕ್ರಿಕೆಟಿಗರಿಗೆ ಈ ನಿವೇಶನವನ್ನು ನೀಡಲಿದ್ದೇವೆ. ಅದರ ನಂತರ, ಯಾವುದೇ ಕ್ರಿಕೆಟಿಗರು ಈ ನಿವೇಶನಗಳನ್ನು ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲು ಬಯಸಿದರೆ, ನಾವು ಅದನ್ನು ಸಹ ಮಾಡುತ್ತೇವೆ. ನಮ್ಮ ಕೈಗಾರಿಕಾ ಪ್ರದೇಶದಲ್ಲಿ 230 ಪ್ಲಾಟ್ಗಳಿವೆ. ಅದರಲ್ಲಿ ಆಟಗಾರರಿಗೆ 16 ಪ್ಲಾಟ್ಗಳನ್ನು ಕಾಯ್ದಿರಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.