ಬೆಂಗಳೂರು: ನಾನ್ ಪ್ರೀಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡುತ್ತಿದೆ. ಬರುವ ಹೊಸ ವರ್ಷದಿಂದ ಕೆಎಂಎಫ್ (KMF) ಮಾದರಿಯಲ್ಲೇ ಕುರಿ ಹಾಗೂ ಮೇಕೆ ಮಾಂಸ ಮಾರಾಟ (Meet Sale) ಮಾಡುವ ಪ್ಲಾನ್ ಮಾಡಲಾಗಿದೆ.
ರಾಜ್ಯದ ತುಮಕೂರು (Tumakuru) ಹಾಗೂ ಚಿತ್ರದುರ್ಗದ (Chitradurga) ಕುರಿ ಹಾಗೂ ಮೇಕೆ ಮಾಂಸಕ್ಕೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಈ ಉತ್ತಮ ಗುಣಮಟ್ಟದ, ರೋಗರಹಿತ ಮಾಂಸವನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಜ್ಜಾಗುತ್ತಿದೆ. ಕರ್ನಾಟಕ ಸರ್ಕಾರ, ಪಶುಸಂಗೋಪನೆ ಇಲಾಖೆ (Department of Animal Husbandry) ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ ಮಾದರಿಯಲ್ಲಿಯೇ ರಾಜ್ಯದಾದ್ಯಂತ ತನ್ನ ಮಳಿಗೆಗಳ ಮೂಲಕ ಪ್ಯಾಕ್ ಮಾಡಿದ ಕುರಿ ಮತ್ತು ಮೇಕೆ ಮಾಂಸವನ್ನು ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡಲು ಯೋಜಿಸುತ್ತಿದೆ.
ಪಶುಸಂಗೋಪನಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಮಳಿಗೆಗಳು ಹೊಸ ವರ್ಷದಿಂದ ಆರಂಭವಾಗುವ ಪ್ಲಾನ್ ಮಾಡಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ 46 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಸಾಯಿಖಾನೆ ಕಾಮಗಾರಿ ನಡೆಯುತ್ತಿದ್ದು, ಜನವರಿ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.