ಗದಗ: ಕುಡಿದ ಮತ್ತಿನಲ್ಲಿ ತಂದೆಯೇ ಹಸುಗೂಸನ್ನು ಹೊತ್ತು ತಂದು ಅಮಾನವೀಯವಾಗಿ ವರ್ತಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಕಳೆದ ಒಂದು ವಾರದ ಹಿಂದೆ ಗದುಗಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ತಾಯಿ ಗದಗ ತಾಲೂಕಿನ ಡಂಬಳ ಗ್ರಾಮ ಮತ್ತು ತಂದೆ ಸವಣೂರ ತಾಲೂಕಿನ ಕೃಷ್ಣಾಪುರದವರಾಗಿದ್ದು ಇಬ್ಬರೂ ಪ್ರೇಮ ವಿವಾಹವಾಗಿದ್ದು. ಯಾವುದೋ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಮನಸ್ಥಾಪ ಆಗಿ ಗಂಡ ಹಸುಗೂಸನ್ನು ಎತ್ತಿಕೊಂಡು ಗದಗದಿಂದ ತನ್ನೂರಿಗೆ ಹೋಗುವಾಗ ಲಕ್ಷೇಶ್ವರ ಪಟ್ಟಣಕ್ಕೆ ಬಂದಿದ್ದಾನೆ.
ಲಕ್ಷೇಶ್ವರ ಬಸ್ ನಿಲ್ದಾಣದಲ್ಲಿ ವೃದ್ಧೆಯೋರ್ವರ ಕೈಯಲ್ಲಿ ಕೂಸನ್ನು ಕೊಟ್ಟು ಮದ್ಯ ಕುಡಿಯಲು ಹೋಗಿದ್ದನಂತೆ. ಈ ವೇಳೆ ತಾನು ಹೋಗುವ ಬಸ್ ಬಂದ ಹಿನ್ನಲೆ ವೃದ್ಧೆ ಕೂಸನ್ನು ಅಲ್ಲಿಯೇ ಬಿಟ್ಟು ಬಸ್ ಹತ್ತಿದ್ದಾಳೆ. ವಾಪಸ್ ಬಂದ ಪಾಪಿ ತಂದೆ ಕೂಸನ್ನು ಎತ್ತಿಕೊಂಡು ಹಸುಗೂಸಿನ ಪ್ರಜ್ಞೆಯೂ ಇಲ್ಲದೇ ರಸ್ತೆಯುದ್ದಕ್ಕೂ ಜೋತಾಡಿಸಿದ್ದಾನೆ. ತಾಯಿಯಿಂದ ಬೇರ್ಪಟ್ಟ ಕೂಸು ಹಸಿವು, ನೋವಿನಿಂದ ಕಿರಚಾಡಿದೆ.
ಇದನ್ನು ಕಂಡು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು ಕೂಸು ಸಹಿತ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಕೂಸಿನ ಪ್ರಾಣಾಪಾಯದಿಂದ ಪಾರು ಮಾಡಿ ಕರ್ತವ್ಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
ಪರಿಶೀಲನೆ ನಡೆಸಲಾಗಿ ಈತ ಹಸುಗೂಸಿನ ತಂದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪಿಎಸ್ಐ ಯೂಸೂಫ್ ಜಮಾಲಾ, ಪೊಲೀಸ್ ಸಿಬ್ಬಂದಿಗಳು, ಡಾ. ಶ್ರೀಕಾಂತ ಕಾಟೇವಾಲೆ, ಡಾ. ಅಬ್ದುಲ್ ಮಳಗಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ದತ್ತು ಕೆಂದ್ರದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.